ಬೆಂಗಳೂರು, ಜು 26 (DaijiworldNews/PY): "ಮೀರ್ಸಾದಿಕ್ ಕಟೀಲರ ಆಡಿಯೋದ ಮಿಮಿಕ್ರೀ ಆರ್ಟಿಸ್ಟ್ ಸ್ವತಃ ನಳಿನ್ ಕುಮಾರ್ ಕಟೀಲ್ ಅವರೇ ಎನ್ನುವುದು ಸಾಬೀತಾಯ್ತು!" ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಮೀರ್ಸಾದಿಕ್ ಕಟೀಲರ ಆಡಿಯೋದ ಮಿಮಿಕ್ರೀ ಆರ್ಟಿಸ್ಟ್ ಸ್ವತಃ ನಳಿನ್ ಕುಮಾರ್ ಕಟೀಲ್ ಅವರೇ ಎನ್ನುವುದು ಸಾಭೀತಾಯ್ತು! ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯ ಆತ್ಮ ಎನ್ನುತ್ತಲೇ ಆತ್ಮ'ವಂಚನೆ' ಮಾಡಿದ ಕಟೀಲ್ ಇಂದು ಬಲು 'ಸಂತೋಷ'ದಿಂದ ಕುಣಿದು ಕುಪ್ಪಳಿಸುತ್ತಿರಬಹುದು! ಅದೇನೇ ಆದರೂ ಹಿರಿಯ ನಾಯಕನಿಗೆ ಕಣ್ಣೀರು ಹಾಕುವಂತಹ ಕಷ್ಟ ಕೊಡಬಾರದಿತ್ತು ಬಿಜೆಪಿ" ಎಂದಿದೆ.
"ಬಿಜೆಪಿ ನಾಯಕರು ಸರ್ಕಾರಿ ಕಿಟ್ಗಳಿಗೆ ತಮ್ಮ ಫೋಟೋ ಹಾಕಿ ಬಿಟ್ಟಿ ಪ್ರಚಾರ ನಡೆಸಿದ್ದರು, ಆದರೆ ಸರ್ಕಾರ ಮಾಡಬಹುದಾದ ಕೆಲಸವನ್ನು ಕಾಂಗ್ರೆಸ್ ಮಾಡಿ ತೋರಿಸಿದೆ. ನಮ್ಮ #ಸಹಾಯಹಸ್ತ ಅಭಿಯಾನದಲ್ಲಿ ರಾಜ್ಯದ 2.5 ಕೋಟಿ ಜನರಿಗೆ ನೆರವಾಗಿದ್ದೇವೆ ಎಂಬುದು ಸಾರ್ಥಕತೆಯ ಸಂಗತಿ ನೀವೇನು ಮಾಡಿದ್ದೀರೆಂದು ಕೇಳಿದವರಿಗೆ ಉತ್ತರ ಸಿಕ್ಕಿರಬಹುದು!" ಎಂದು ಹೇಳಿದೆ.
"ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು "ನಾಯಕತ್ವ ಬದಲಾವಣೆ" ಅಲ್ಲ "ಸರ್ಕಾರದ ಬದಲಾವಣೆ" ಬಿಜೆಪಿ ತಾಕತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿ" ಎಂದಿದೆ.
"ವೈಫಲ್ಯಕ್ಕಾಗಿಯೇ? ಒತ್ತಡಕ್ಕಾಗಿಯೇ? ಅಸಹಕಾರಕ್ಕಾಗಿಯೇ? ಬೆದರಿಕೆಗಾಗಿಯೇ? ಬ್ಲಾಕ್ಮೇಲ್ಗಾಗಿಯೇ? ಯಾವ ಕಾರಣಕ್ಕಾಗಿ ಕಣ್ಣೀರಿನೊಂದಿಗೆ ರಾಜೀನಾಮೆ ನೀಡಿದ್ದು ಎನ್ನುವುದನ್ನ ರಾಜ್ಯದ ಜನತೆಗೆ ತಿಳಿಸುವಿರಾ ಯಡಿಯೂರಪ್ಪ ಅವರೇ? ಸಮರ್ಪಕ ಆಡಳಿತ ನಡೆಸಲು ನಿಮಗೆ ಯೋಗ್ಯತೆ ಒದಗಿಬರುವುದು ಯಾವಾಗ ಹೇಳುವಿರಾ ಬಿಜೆಪಿ?" ಎಂದು ಪ್ರಶ್ನಿಸಿದೆ.