ಬೆಂಗಳೂರು, ಜು 26 (DaijiworldNews/PY): "ಯಡಿಯೂರಪ್ಪ ಅವರು ರಾಷ್ಟ್ರ, ರಾಜ್ಯ ರಾಜಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಸಿಎಂ ಸ್ಥಾನಕಷ್ಟೇ ರಾಜೀನಾಮೆ ನೀಡಿದ್ದಾರೆ" ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರು ಹೈಕಮಾಂಡ್ ಸಲಹೆಯಂತೆ ರಾಜೀನಾಮೆ ನೀಡಿದದ್ದು, ನಿಷ್ಠಾವಂತ ಕಾರ್ಯಕರ್ತರು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ" ಎಂದಿದ್ದಾರೆ.
"ಯಡಿಯೂರಪ್ಪ ಅವರ ನಾಯಕತ್ವದ ಅಡಿಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಅವಕಾಶ ದೊರೆತಿದೆ. ಅವರು ರಾಜ್ಯದಲ್ಲಿ ಎರಡು ಬಾರಿ ಎದುರಾದ ನೆರೆಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವೈಯುಕ್ತಿಕವಾಗಿ ನೋವಾಗಿದೆ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
"ಯಡಿಯೂರಪ್ಪ ಅವರು ನಮಗೆಲ್ಲರಿಗೂ ಮಾರ್ಗದರ್ಶನ ಹಾಗೂ ನಾಯಕತ್ವವನ್ನು ನೀಡಿದ್ದಾರೆ. ಯಡಿಯೂರಪ್ಪ ಅವರ ರಾಜೀನಾಮೆ ನಿಜಕ್ಕೂ ಆಶ್ಚರ್ಯ ಹಾಗೂ ನಿರಾಸೆ ಉಂಟುಮಾಡಿದೆ. ನಾವೆಲ್ಲರೂ ಒಂದು ತಂಡವಾಗಿ ರಾಜ್ಯವನ್ನು ಮುನ್ನಡೆಸಬೇಕಿದೆ" ಎಂದಿದ್ದಾರೆ.