ನವದೆಹಲಿ, ಜು 26 (DaijiworldNews/PY): "ಚೀನಾದ ಕ್ರಮಗಳನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳು ಉಂಟಾಗುತ್ತವೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಯಾವ ರೀತಿಯಾಗಿ ಚೀನಾವನ್ನು ನಿಭಾಯಿಸಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವಾದ ನಿಲುಗಳಿಲ್ಲ. ಈಗ ಅವರ ಕಾರ್ಯಗಳನ್ನು ನಿರ್ಲಕ್ಷಿಸುವುದರಿಂದ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳು ಉಂಟಾಗುತ್ತವೆ. ಸರ್ಕಾರ ದಿಟ್ಟತನದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು" ಎಂದಿದ್ದಾರೆ.
ಟ್ವೀಟ್ನಲ್ಲಿ, ಪೂರ್ವ ಲಡಾಖ್ನ ಡೆಮ್ಚೊಕ್ನಲ್ಲಿ ಇನ್ನೂ ಕೂಡಾ ಚೀನಾದ ಟೆಂಟ್ಗಳಿವೆ ಎನ್ನುವ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ್ದಾರೆ.
ಇದೇ ವಿಚಾರದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ಭೂಮಿಯಿಂದ ಚೀನಾವನ್ನು ತೆಗೆದುಹಾಕಿ ಎನ್ನುವ ಹ್ಯಾಷ್ ಟ್ಯಾಗ್ ಬಳಸಿದ್ದು, "ನಿಮ್ಮ ದಿಟ್ಟತನವನ್ನು ಪ್ರದರ್ಶಿಸಿ ಸಾಹೇಬ್" ಎಂದಿದ್ದಾರೆ.