ಬೆಂಗಳೂರು, ಜು 26 (DaijiworldNews/MS): ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ " ಬಿಎಸ್ ವೈ ಕಣ್ಣೀರು ಪದತ್ಯಾಗ' ವಲ್ಲ 'ಪದಚ್ಯುತಿ' ಎಂದು ಸಾರಿ ಹೇಳುತ್ತಿದೆ" ಎಂದು ವ್ಯಂಗ್ಯವಾಡಿದೆ.
ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ. ಅವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ ಬಿಜೆಪಿಯ ಹೈಕಮಾಂಡ್ 'ಪದಚ್ಯುತಿ' ಮಾಡಿದ್ದೇಕೆ ? ಎಂದು ಪ್ರಶ್ನಿಸಿದೆ.
ಸಮ್ಮಿಶ್ರ ಸರ್ಕಾರ ಉರುಳಿ ರಾಜ್ಯದಲ್ಲಿ ಕಮಲ ಅರಳಿ ಇಂದಿಗೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ಸರ್ಕಾರದ ಸಾಧನ ಸಮಾವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ,ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಣ್ಣೀರಿಟ್ಟು ತಮ್ಮ ಸಿಎಂ ಸ್ಥಾನದ ಪದತ್ಯಾಗದ ಘೋಷಣೆ ಮಾಡಿದ್ದರು.
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರಕ್ಕೆ ಅವಕಾಶ ಕೊಡಲ್ಲ ಆದರೆ ಜೆ.ಪಿ. ನಡ್ಡಾ ಅವರು ನನಗೆ 2 ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟರು. ಪ್ರಧಾನಿ ಮೋದಿ, ಅಮಿತ್ ಶಾ ಜೋಡಿ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ದೇಶವನ್ನು ಮುನ್ನಡೆಸುವ ಅವಕಾಶ ಸಿಗಬೇಕು ಎಂದಿದ್ದರು.