ನವದೆಹಲಿ, ಜು 26 (DaijiworldNews/MS): ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮಾಡುತ್ತಿರುವ ನಿರಂತರ ಹೋರಾಟಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಕೈ ಜೋಡಿಸಿದ್ದು, ಇಂದು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್ತಿಗೆ ಆಗಮಿಸುವ ಮೂಲಕ ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
ವಿಜಯ್ ಚೌಕ್ ಮೂಲಕ ಸಂಸತ್ತಿಗೆ ಪ್ರವೇಶಿಸಿದ್ದು, ಎಲ್ಲಾ ಮೂರು ಕಾಯ್ದೆಗಳನ್ನೂ ಹಿಂಪಡೆಯಿರಿ ಎಂಬ ಘೋಷ ವಾಕ್ಯವನ್ನು ಟ್ರ್ಯಾಕ್ಟರ್ ಮುಂಭಾಗಕ್ಕೆ ಕಟ್ಟಲಾಗಿತ್ತು. , ವಯನಾಡ್ ಸಂಸದರಾಗಿರುವ ರಾಹುಲ್ ಗಾಂಧಿ ಗೆ ಪಂಜಾಬ್ ಮತ್ತು ಹರಿಯಾಣದ ಸಂಸದರಾಗಿರುವ ದೀಪೇಂದರ್ ಹೂಡಾ, ರಾವ್ನೀತ್ ಸಿಂಗ್ ಪ್ರತಾಪ್ ಸಿಂಗ್ ಬಜ್ವಾ ಮುಂತಾದವರು ಸಾಥ್ ನೀಡಿದರು.
ಟ್ರ್ಯಾಕ್ಟರ್ ನಲ್ಲಿದ್ದ ಇತರ ಸಂಸದರು "ನೂತನ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ" ಮತ್ತು "ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಿ" ಎಂಬ ಫಲಕಗಳನ್ನು ಹಿಡಿದಿರುವುದು ಕಂಡುಬಂತು
ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರೈತರ ದಮನಿತ ಧ್ವನಿಗಳನ್ನು ಸಂಸತ್ತಿಗೆ ತಂದಿದ್ದೇನೆ ಎಂದು ಹೇಳಿದರು. ರೈತರಿಗೆ ಕರಾಳವಾಗಿರುವ ಕಾನೂನುಗಳನ್ನು ತಕ್ಷಣ ರದ್ದುಗೊಳಿಸಿ ಎಂದು ಒತ್ತಾಯಿಸಿದರು. ಅಲ್ಲದೆ.ಸರ್ಕಾರ ರೈತರ ಧ್ವನಿಯನ್ನು ನಿಗ್ರಹಿಸುತ್ತಿದ್ದಾರೆ, ನೂತನ ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡುತ್ತಿಲ್ಲ ಎಂದು ಅಪಾದಿಸಿದರು.