ನವದೆಹಲಿ, ಜು.26 (DaijiworldNews/HR): ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದು, ಅವರು ಜಾಮೀನು ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಗೆ ಸಿಬಿಐ ಆಕ್ಷೇಪ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
"ಆರೋಪಿಯು ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷಿಗಳನ್ನು ಬೆದರಿಸುವ, ಸಾಕ್ಷ್ಯಗಳನ್ನು ನಾಶಪಡಿಸುವ ಹಾಗೂ ವಿಚಾರಣೆಯನ್ನು ದಿಕ್ಕುತಪ್ಪಿಸುವ ಸಾಧ್ಯತೆ ಇದ್ದು, ಅಂತಹ ವ್ಯಕ್ತಿಗೆ ಜಾಮೀನು ನೀಡಲು ಯಾವುದೇ ಕಾರಣವಿಲ್ಲ. ಹೈಕೋರ್ಟ್ ಕೂಡ ಅವರ ಜಾಮೀನು ಅರ್ಜಿಯನ್ನು ಈಗಾಗಲೇ ತಳ್ಳಿಹಾಕಿದೆ" ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸಿಬಿಐಯು ತಿಳಿಸಿದೆ.
ಇನ್ನು ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ನ್ಯಾಯಪೀಠ, ಈ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳಲಿದೆ.
ಧಾರವಾಡದ ಸಪ್ತಾಪುರದ ಜಿಮ್ನಲ್ಲಿ ಯೋಗೇಶ್ಗೌಡ ಗೌಡ ಅವರನ್ನು 2016ರಲ್ಲಿ ಹತ್ಯೆ ಮಾಡಲಾಗಿದ್ದು, ಈ ಪ್ರಕರಣದ ತನಿಖೆಯನ್ನು 2019ರಲ್ಲಿ ರಾಜ್ಯ ಸರ್ಕಾರವು ಸಿಬಿಐಗೆ ಒಪ್ಪಿಸಿತ್ತು.