ಚಿಕ್ಕಬಳ್ಳಾಪುರ, ಜು 26 (DaijiworldNews/PY): "ರಾಜ್ಯದಲ್ಲಿ ಉಚಿತ ಕೊರೊನಾ ಲಸಿಕೆ ನೀಡುವ ಅಭಿಯಾನ ಸುಸೂತ್ರವಾಗಿ ನಡೆಯುತ್ತಿದ್ದು, ಇನ್ನು 2-3 ತಿಂಗಳಲ್ಲಿ ಸುಮಾರು 5-6 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆಲವು ಪಕ್ಷಗಳು ದೇಶದಲ್ಲಿ ಕೊರೊನಾ ಲಸಿಕೆ ಬಗ್ಗೆ ಭಯ ಹರಡುತ್ತಿವೆ. ಈ ಕಾರಣದಿಂದ ಮೊದಲು ಜನರು ಕೊರೊನಾ ಲಸಿಕೆಗೆ ಪಡೆದುಕೊಳ್ಳಲು ಹಿಂಜರಿದಿದ್ದರು. ಕೊರೊನಾ ಲಸಿಕೆ ಪಡೆದುಕೊಳ್ಳುವುದರಿಂದ ಕೊರೊನಾ ವಿರುದ್ದ ಪರಿಣಾಮಕಾರಿಯಾಗಿ ಹೋರಾಡಲು ನೆರವಾಗುತ್ತದೆ. ಈ ಬಗ್ಗೆ ಜನರು ತಿಳಿದಿರುವುದರಿಂದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೊರೊನಾ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
"ಕೊರೊನಾ ಪರೀಕ್ಷೆ ಸೇರಿದಂತೆ ಆಂಬ್ಯುಲೆನ್ಸ್ ಹಾಗೂ ಚಿಕಿತ್ಸೆಯನ್ನು ನಾವು ಉಚಿತವಾಗಿ ನೀಡುತ್ತಿದ್ದೇವೆ. ಎಲ್ಲರೂ ಕೂಡಾ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿದರೆ ಮೂರನೇ ಅಲೆ ಬರಲು ಸಾಧ್ಯವಿಲ್ಲ" ಎಂದಿದ್ದಾರೆ.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕಾರಣ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ ಎನ್ನುವ ಬಗ್ಗೆ ಮಾತನಾಡಿದ ಅವರು, "ಇದಕ್ಕೆ ಈಗಾಗಲೇ ಪೂರಕವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ನೆರೆಪೀಡಿತ ಐದಾರು ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದ್ದು, ಅಲ್ಲಿನ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಔಷಧಿ ಸೇರಿದಂತೆ ಶುದ್ಧ ನೀರು ಪೂರೈಕೆ ಮಾಡಲಾಗಿದೆ. ಅಲ್ಲದೇ, ಮೊಬೈಲ್ ಯೂನಿಟ್ಸ್ ಕ್ಲಿನಿಕ್ಗಳನ್ನು ಕಳುಹಿಸಲಾಗಿದೆ" ಎಂದು ತಿಳಿಸಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಬದಲಾವಣೆ ಮಾತನಾಡುವಷ್ಟು ದೊಡ್ಡವರಲ್ಲ ನಾವು. ನಾವು ಸಿಎಂ ಹಾಗೂ ಪಕ್ಷದ ವರಿಷ್ಟರು ಕೈಗೊಳ್ಳು ತೀರ್ಮಾನಕ್ಕೆ ಬದ್ಧ" ಎಂದು ಹೇಳಿದ್ದಾರೆ.