ಪಣಜಿ, ಜು 25 (DaijiworldNews/PY): "ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ. ಅವರೊಬ್ಬ ಉತ್ತಮ ಹಾಗೂ ಜನಪ್ರಿಯ ನಾಯಕ. ಅವರ ಜನಪ್ರಿಯತೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಗೋವಾದಲ್ಲಿ ಮಾತನಾಡಿದ ಅವರು, "ಬಿಎಸ್ವೈ ಅವರು ನಾಲ್ಕು ಬಾರಿ ಸಿಎಂ ಆಗಿ ಕರ್ನಾಟಕ ಜನತೆಯ ಸೇವೆ ಮಾಡಲು ಅವಕಾಶ ಸಿಕ್ಕಿದೆ. ವಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವರಿಗೆ ಅವಕಾಶ ಸಿಕ್ಕಿದೆ. ಇಂತಹ ಅವಕಾಶ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಸಿಕ್ಕಿಲ್ಲ. ಈ ಎಲ್ಲಾ ಅವಕಾಶಗಳನ್ನು ಬಿಜೆಪಿ ನೀಡಿದ್ದು, ಕಾರ್ಯಕರ್ತನಿಂದ ಹಿಡಿದು ನಾಯಕನಾಗಿ ಬೆಳೆಯುವಂತೆ ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದೆ" ಎಂದಿದ್ದಾರೆ.
"ಇಂದು ಎಲ್ಲಾ ಕಾರ್ಯಕರ್ತರ ಶಕ್ತಿಯ ಸಲುವಾಗಿ ಪಕ್ಷಕ್ಕೆ ಶಕ್ತಿ ಬಂದಿದೆ. ಯಡಿಯೂರಪ್ಪ ಅವರ ಬಗ್ಗೆ ಸಚಿವರು, ಶಾಸಕರ ಬೇಸರದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೋಡಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.