ಬೆಂಗಳೂರು, ಜು 25 (DaijiworldNews/PY): "ನಾಯಕತ್ವ ಬದಲಾವಣೆಯ ಕೂಗೆದ್ದಿರುವುದೇ 2 ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎನ್ನುವುದಕ್ಕೆ ಸಾಕ್ಷಿ. ಕುರ್ಚಿಗಾಗಿ ಕಿತ್ತಾಡುವುದಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೇರುವುದು" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಈ 2 ವರ್ಷದಲ್ಲಿ, ಕರೋನಾ ಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ, ಭ್ರಷ್ಟಾಚಾರ ಮುಕ್ತ ಕರ್ನಾಟಕ, ಹಸಿವು ಮುಕ್ತ ಕರ್ನಾಟಕ ಮಾಡುವುದು ಬಿಜೆಪಿ ಪಕ್ಷದ ಆದ್ಯತೆ ಆಗಬೇಕಿತ್ತು, ಆದರೆ ಅವರ ಆದ್ಯತೆ ಬಿಎಸ್ವೈ ಮುಕ್ತ ಬಿಜೆಪಿ ಮಾಡುವುದಷ್ಟೇ ಆಗಿತ್ತು!" ಎಂದು ಲೇವಡಿ ಮಾಡಿದೆ.
"ಸರ್ಕಾರಕ್ಕೆ 2 ವರ್ಷ, ಕಮರಿತು ಜನರ ಹರ್ಷ. ನೆರೆ ಸಂತ್ರಸ್ತರ ಬದುಕು ದುರ್ಬರ, ಉದ್ಯೋಗ, ಆದಾಯ ನಷ್ಟ, ರೈತರಿಗೆ ಸಿಗದ ಬೆಲೆ, ದುಬಾರಿ ಗೊಬ್ಬರದ ಬರೆ, ಬೀದಿ ಹೆಣವಾದ ಕೋವಿಡ್ ರೋಗಿಗಳು, ಆಕ್ಸಿಜನ್ ಇಲ್ಲದೆ ಸತ್ತ ಸೋಂಕಿತರು, ಬೆಲೆ ಏರಿಕೆ ಬಿಜೆಪಿ ಅಧಿಕಾರ ದಾಹದಿಂದ ನೀಗಲಿಲ್ಲ ಜನರ ಸಂಕಷ್ಟ" ಎಂದು ಕಿಡಿಕಾರಿದೆ.
"ಆಪರೇಷನ್ ಕಮಲದ ಅನೈತಿಕ ಕೂಸಾಗಿ ಹುಟ್ಟಿದ ಈ ಸರ್ಕಾರ ಎರಡು ವರ್ಷದಲ್ಲಿ ಒಂದೇ ಒಂದು ಜನಪರ ಯೋಜನೆ ಘೋಷಿಸಿಲ್ಲ. ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಯೋಜನೆಗಳಿಗೆ ಅನುದಾನ ಕಡಿತ ಮಾಡಿದ್ದೇ ಬಿಜೆಪಿ ಸಾಧನೆ! 2 ವರ್ಷಗಳ ಆಡಳಿತವನ್ನು ಲೂಟಿ, ಕಿತ್ತಾಟಲ್ಲಿಯೇ ಕಳೆದರು" ಎಂದಿದೆ.
"ಡಬಲ್ ಇಂಜಿನ್ನ ಡಕೋಟಾ ಬಸ್ಸಿನಲ್ಲಿ ಎಲ್ಲರೂ ಡ್ರೈವರ್ ಸೀಟಿಗೆ ಟವೆಲ್ ಹಾಕುವವರೇ ಆಗಿದ್ದಾರೆ! ನಾಯಕತ್ವ ಬದಲಾವಣೆಯ ಕೂಗೆದ್ದಿರುವುದೇ 2 ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎನ್ನುವುದಕ್ಕೆ ಸಾಕ್ಷಿ.ಕುರ್ಚಿಗಾಗಿ ಕಿತ್ತಾಡುವುದಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೇರುವುದು" ಎಂದು ಹೇಳಿದೆ.