ಹುಬ್ಬಳ್ಳಿ, ಜು 25 (DaijiworldNews/PY): "ಸಿಎಂ ಬದಲಾವಣೆ ವಿಚಾರವಾಗಿ ಹೈಕಮಾಂಡ್ನಿಂದ ಯಾವುದೇ ಸೂಚನೆ ಬಂದಿಲ್ಲ. ಸಿಎಂ ಹುದ್ದೆ ಖಾಲಿ ಇಲ್ಲ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಯಕತ್ವ ಬದಲಾವಣೆ ವಿಚಾರವಾಗಿ ಪಕ್ಷದ ವರಿಷ್ಟರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ತಿಳಿದಿಲ್ಲ. ಈ ವಿಚಾರವಾಗಿ ಯಡಿಯೂರಪ್ಪ ಅವರಿಗೂ ಅವರಿಂದ ಸೂಚನೆ ಬಂದಂತಿಲ್ಲ. ಅವರ ಸೂಚನೆ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಸದ್ಯ ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ" ಎಂದಿದ್ದಾರೆ.
"ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ಕೇಶವ ಕುಂಜಕ್ಕೆ ನಾನು ಭೇಟಿ ನೀಡಿದ ಬಗ್ಗೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಕೇಶವ ಕುಂಜಕ್ಕೆ ನಾನು ಹಲವಾರು ಬಾರಿ ಭೇಟಿ ನೀಡಿದ್ದೇನೆ. ನಾವೇನು ಪಾಕಿಸ್ತಾನ ಹಾಗೂ ಇಂಡಿಯಾನಾ?" ಎಂದು ಪ್ರಶ್ನಿಸಿದ್ದಾರೆ.
"ಪಕ್ಷದಲ್ಲಿ ಗೊಂದಲಗಳಿರುವುದು ಸರ್ವೇ ಸಾಮಾನ್ಯ. ಈ ಗೊಂದಲಗಳು ಬೇಗನೇ ನಿವಾರಣೆಯಾಗುತ್ತವೆ. ಹಾಗೆಂದು ಅಭಿವೃದ್ದಿ ಕಾರ್ಯಗಳು ಹಾಗೂ ಸರ್ಕಾರದ ಮಟ್ಟದಲ್ಲಿನ ಕಾರ್ಯಗಳು ಸ್ಥಗಿತಗೊಂಡಿಲ್ಲ" ಎಂದಿದ್ದಾರೆ.
"75 ವರ್ಷಕ್ಕಿಂತ ಮೇಲ್ಪಟ್ಟವರು ರಾಜಕಾರಣದಲ್ಲಿ ಯಾವುದೇ ಉನ್ನತ ಹುದ್ದೆಯಲ್ಲಿರಬಾರದು ಎಂದು ನಮ್ಮ ಬಿಜೆಪಿ ಸಂವಿಧಾನದಲ್ಲಿಲ್ಲ. ಯಡಿಯೂರಪ್ಪ ಅವರು 75 ವರ್ಷ ಮೀರಿದ ಬಳಿಕವೇ ಮುಖ್ಯಮಂತ್ರಿಯಾಗಿದ್ದಾರೆ" ಎಂದು ತಿಳಿಸಿದ್ದಾರೆ.