ತುಮಕೂರು, ಜು.25 (DaijiworldNews/HR): ಪಕ್ಷದಲ್ಲಿನ ಹಿರಿಯ ನಾಯಕರನ್ನು ಅವಮಾನಿಸುವುದು ಬಿಜೆಪಿಯ ಸಂಸ್ಕೃತಿಯಾಗಿದ್ದು, ಅದೇ ರೀತಿ ಯಡಿಯೂರಪ್ಪ ಅವರನ್ನು ಕೂಡ ಅವಮಾನಿಸಿ ಕಸದ ಬುಟ್ಟಿಗೆ ಹಾಕಲಾಗುತ್ತಿದೆ" ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರವು ಹೈಜಾಕ್ ಸರ್ಕಾರವಾಗಿದ್ದು, ಇದು ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿರುವ ಸರ್ಕಾರವಾಗಿದೆ. ಜನರು ಇದರಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷವು ಅಭಿವೃದ್ಧಿ ಪರ ಸರ್ಕಾರ ನೀಡಲು ಯತ್ನಿಸಲಿದೆ" ಎಂದರು.
ಇನ್ನು "ಮುಖ್ಯಮಂತ್ರಿ ಬದಲಾವಣೆ ಕುರಿತ ವಿಷಯದಲ್ಲಿ ನಾವು ಮೂಗು ತೂರಿಸುವುದಿಲ್ಲ. ಉತ್ತಮ ಆಡಳಿತ ಕೊಟ್ಟಿಲ್ಲ ಎಂದೇ ಅವರು ಯಡಿಯೂರಪ್ಪ ಅವರನ್ನು ಬದಲಾಯಿಸುತ್ತಿದ್ದಾರೆ. ನಾವು ನಮ್ಮ ಕಾಂಗ್ರೆಸ್ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದೇವೆ" ಎಂದಿದ್ದಾರೆ.
"ಈಗಿರುವ ಭ್ರಷ್ಟ ಮುಖ್ಯಮಂತ್ರಿ ಬದಲಾಗಿ ಮತ್ತೊಬ್ಬ ಭ್ರಷ್ಟಮುಖ್ಯಮಂತ್ರಿ ಬರಲಿದ್ದು, ಈಗಿರುವ ಮುಖ್ಯಮಂತ್ರಿ ಅಧಿಕಾರದಿಂದ ಕೆಳಗಿಳಿದರೆ ಆ ಜಾಗಕ್ಕೆ ಮತ್ತೊಬ್ಬ ಭ್ರಷ್ಟಮುಖ್ಯಮಂತ್ರಿ ಬರಲಿದ್ದಾರೆ" ಎಂದು ಹೇಳಿದ್ದಾರೆ.