ಬೆಂಗಳೂರು, ಜು.25 (DaijiworldNews/HR): ಕರ್ನಾಟಕದಲ್ಲಿ ಮಳೆ ಅಬ್ಬರಕ್ಕೆ ಪ್ರವಾಹ ಭೀತಿ ಉಂಟಾಗಿದ್ದು, ಉತ್ತರ ಕನ್ನಡ, ಬೆಳಗಾವಿ, ಕರಾವಳಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರಿ ಅನಾಹುತಗಳು ಸಂಭವಿಸಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಪ್ರವಾಹ ಪರಿಶೀಲನೆಗೆ ಬೆಳಗಾವಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪರಿಸ್ಥಿತಿ ನಿಭಾಯಿಸಲು 7 ಎನ್ಡಿಆರ್ಎಫ್ ತಂಡ ನಿಯೋಜಿಸಲಾಗಿದ್ದು, 15 ಎಸ್ಡಿಆರ್ಎಫ್ ನಿಯೋಜಿಸಲಾಗಿದೆ. ಭಾರಿ ಮಳೆಯಿಂದಾಗಿ 73 ರಾಷ್ಟ್ರೀಯ ಹೆದ್ದಾರಿಗಳು ಕುಸಿದಿದ್ದು, 16 ಸ್ಥಳಗಳಲ್ಲಿ ಭೂ ಕುಸಿತವುಂತಾಗಿದೆ. 134 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು ಒಂದು ತಿಂಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು" ಎಂದಿದ್ದಾರೆ.
ಇನ್ನು ಕರಾವಳಿ ಭಾಗದಲ್ಲಿ ಇನ್ನೂ 3 ದಿನ ಭಾರಿ ಮಳೆಯಾಗಲಿದ್ದು, ಪ್ರವಾಹದಲ್ಲಿ ಸಿಲುಕಿದ್ದ 153 ಜನರನ್ನು ರಕ್ಷಿಸಲಾಗಿದ್ದು, ಒಟ್ಟು 31,360 ಜನರನ್ನು ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿತ ಅವಘಡದಲ್ಲಿ ರಾಜ್ಯದಲ್ಲಿ 9 ಜನರು ಸಾವನ್ನಪ್ಪಿದ್ದು, ಮೂವರು ಕಣ್ಮರೆಯಾಗಿ, 24417 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ" ಎಂದು ಹೇಳಿದ್ದಾರೆ.