ಬೆಳಗಾವಿ, ಜು 25 (DaijiworldNews/PY): "ಹೈಕಮಾಂಡ್ನಿಂದ ಇಂದು ಸಂಜೆಯೊಳಗೆ ಸಂದೇಶ ಬರಲಿದೆ" ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಲು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂದು ಸಂಜೆ ವೇಳೆಗೆ ಹೈಕಮಾಂಡ್ನಿಂದ ಸಂದೇಶ ಬರಬಹುದು. ಸಂದೇಶ ಬಂದಲ್ಲಿ ನಾನು ತಿಳಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಮೇಲೆ ನನಗೆ ವಿಶ್ವಾಸವಿದೆ" ಎಂದಿದ್ದಾರೆ.
"ಸ್ವಾಮೀಜಿಗಳು ಸಮಾವೇಶ ನಡೆಸುವ ಅವಶ್ಯಕತೆ ಇರಲಿಲ್ಲ. ಪಕ್ಷದ ವರಿಷ್ಟರ ಮೇಲೆ ನನಗೆ ವಿಶ್ವಾಸವಿದೆ. ದಲಿತ ಸಿಎಂ ಮಾಡುವುದು ನಾನಲ್ಲ, ಹೈಕಮಾಂಡ್. ಹೈಕಮಾಂಡ್ನಿಂದ ಇಂದು ಸಂಜೆ ಯಾವ ಸಂದೇಶ ಬರಲಿದೆ ಎನ್ನುವುದನ್ನು ಕಾದು ನೋಡೋಣ" ಎಂದು ತಿಳಿಸಿದ್ದಾರೆ.
"ಮಹಾರಾಷ್ಟ್ರದಲ್ಲಿಯೂ ಮಳೆ ಕಡಿಮೆಯಾಗಿದೆ. ಅಲ್ಲಿ ಮಳೆ ಕಡಿಮೆಯಾಗಿರುವ ಕಾರಣ ಪ್ರವಾಹ ಇಳಿಮುಖವಾಗಿದೆ" ಎಂದಿದ್ದಾರೆ.