ಲಕ್ನೋ, ಜು 25 (DaijiworldNews/PY): ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಂದು ಉತ್ತರಪ್ರದೇಶದ ಜನತೆಗೆ ಉಡುಗೊರೆಯೊಂದನ್ನು ನೀಡಲು ಮುಂದಾಗಿದ್ದು, ಆಗಸ್ಟ್ 15ರಿಂದ ರಾಜ್ಯದ 217 ಪಟ್ಟಣಗಳಿಗೆ ಉಚಿತ ವೈಫೈ ಸೌಲಭ್ಯ ನೀಡಲು ತಯಾರಿ ನಡೆಸಿದೆ.
17 ಮುನ್ಸಿಪಾಲ್ ಕಾರ್ಪೊರೇಷನ್ ಸೇರಿದಂತೆ 75 ಜಿಲ್ಲಾ ಕೇಂದ್ರಗಳು ಈ ಯೋಜನೆಯಲ್ಲಿ ಒಳಗೊಂಡಿವೆ. ನಗರಾಭಿವೃದ್ಧಿ ಇಲಾಖೆ ಸಿಂಎ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಉಚಿತ ವೈಫೈ ನೀಡುವ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಪುರಸಭೆ ಆಯುಕ್ತರಿಗೆ ಹಾಗೂ ವಿಭಾಗೀಯ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು, ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ವೈಫೈ ಸೌಲಭ್ಯ ನೀಡಲು ಹಾಟ್ಸ್ಪಾಟ್ ಗುರುತು ಮಾಡುವಂತೆ ತಿಳಿಸಲಾಗಿದೆ.
ಉತ್ತರಪ್ರದೇಶದ ಪ್ರತಿ ಪಟ್ಟಣದ ರೈಲು ನಿಲ್ದಾಣ, ನ್ಯಾಯಾಲಯ, ಬಸ್ ನಿಲ್ದಾಣ ಸೇರಿದಂತೆ ತಾಲೂಕು ಕಚೇರಿ, ರಿಜಿಸ್ಟ್ರಾರ್ ಆಫೀಸ್, ಬ್ಲಾಕ್ ಆಫೀಸ್ ಹಾಗೂ ಪ್ರಮುಖ ಮಾರುಕಟ್ಟೆಗಳಲ್ಲಿ ಉಚಿತ ವೈಫೈ ಸೌಲಭ್ಯ ಆಗಸ್ಟ್ 15ರಂದು ದೊರೆಯಲಿದೆ. ಈ ಬಗ್ಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಅದರಂತೆ ಉಚಿತ ವೈಫೈ ನೀಡುವ ಭರವಸೆಯನ್ನು ಉಳಿಸಿಕೊಂಡಿದೆ.
ಉತ್ತರಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿ ವಹಿಸಿಕೊಂಡಾಗ ಲಕ್ನೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ಒದಗಿಸಿದ್ದರು. ಈಗ ಅದೇ ರೀತಿ ಜಿಲ್ಲಾ ಕೇಂದ್ರಗಳು ಸೇರಿದಂತೆ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಮುನ್ಸಿಪಲ್ ಕೌನ್ಸಿಲ್ಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡಲು ತಯಾರಿ ನಡೆಸಿದೆ.