ಬೆಂಗಳೂರು, ಜು.24 (DaijiworldNews/HR): ಪಾರ್ಕಿನ್ಸನ್ ರೋಗಕ್ಕೆ ಒಳಗಾಗುವವರ ಪ್ರಮಾಣ 2030 ರ ವೇಳೆಗೆ ಶೇ.200-300 ರಷ್ಟು ಹೆಚ್ಚಾಗಲಿದ್ದು, ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಪಾರ್ಕಿನ್ಸನ್ಸ್ ರಿಸರ್ಚ್ ಅಲಯನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ದೇಶದಲ್ಲಿ ಒಂದು ಲಕ್ಷ ಜನರಲ್ಲಿ 350-400 ಜನರು ಪಾರ್ಕಿನ್ಸನ್ ರೋಗಕ್ಕೆ ಒಳಗಾಗುತ್ತಿದ್ದು, ಈ ಪ್ರಮಾಣ 2030 ರ ವೇಳೆಗೆ ಶೇ.200-300 ರಷ್ಟು ಹೆಚ್ಚಲಿದೆ. ಒಟ್ಟು ಜನಸಂಖ್ಯೆಯ ಶೇ.1 ರಷ್ಟು ಜನರು ಈ ರೋಗದಿಂದ ಸಮಸ್ಯೆಗೆ ಒಳಗಾಗಲಿದ್ದಾರೆ" ಎಂದರು.
ಇನ್ನು "ಪಾರ್ಕಿನ್ ಸನ್ ಹಾಗೂ ಇತರೆ ನ್ಯೂರೋ ಡಿಜನರೇಟಿವ್ ರೋಗಕ್ಕೆ ಸಂಬಂಧಿಸಿದಂತೆ ಪ್ರೊ.ರೇ ತಂಡ ಕೈಗೊಂಡ ಸಂಶೋಧನಾ ಚಟುವಟಿಕೆಗಳಿಗೆ ಅಭಿನಂದಿಸುತ್ತೇನೆ. ಎರಡೂ ಸಂಸ್ಥೆಗಳ ಈ ಸಹಯೋಗದ ಕೆಲಸ ಅಕಾಡೆಮಿಕ್ ವೇದಿಕೆ ಸೃಷ್ಟಿಸಲು ಹಾಗೂ ಕೌಶಲ್ಯಯುತ ಸಂಶೋಧಕರನ್ನು ನಿರ್ಮಿಸಲು ಸಹಕಾರಿಯಾಗಲಿದೆ. ಬೆಂಗಳೂರಿನಲ್ಲಿ ತರಬೇತಿ ಕಾಯಾರ್ಗಾರ ಆಯೋಜಿಸಲು ಸರ್ಕಾರ ಸಿದ್ಧವಿದೆ" ಎಂದು ಹೇಳಿದ್ದಾರೆ.