ಬೆಂಗಳೂರು, ಜು 24 (DaijiworldNews/PY): ಆಟ ಆಡುವ ವೇಳೆ ಗಣೇಶನ ವಿಗ್ರಹ ನುಂಗಿದ್ದ ಮೂರು ವರ್ಷದ ಬಾಲಕನನ್ನು ಯಶಸ್ವಿ ಚಿಕಿತ್ಸೆಯ ಮೂಲಕ ರಕ್ಷಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೂರು ವರ್ಷದ ಮಗ ಆಟ ಆಡುವ ಸಂದರ್ಭ ಸುಮಾರು 4 ಸೆಂ.ಮೀ ಉದ್ದದ ಗಣೇಶ ವಿಗ್ರಹವನ್ನು ನುಂಗಿದ್ದು, ಉಸಿರಾಟಲು ಒದ್ದಾಡುತ್ತಿತ್ತು. ಇದನ್ನು ಕಂಡ ಪೋಷಕರು ಕೂಡಲೇ ಬಾಲಕನನ್ನು ಬೆಳಿಗ್ಗೆ 8.39 ರ ಸುಮಾರಿಗೆ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಕ್ಸ್ರೇ ಮಾಡಿದ ಸಂದರ್ಭ ಗಣೇಶನ ವಿಗ್ರಹ ಹೊಟ್ಟೆಯಲ್ಲಿರುವುದು ತಿಳಿದುಬಂದಿದೆ. ಬಳಿಕ ಒಂದು ಗಂಟೆ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಬಾಲಕನ ಹೊಟ್ಟೆಯಲ್ಲಿದ್ದ ಗಣೇಶನ ವಿಗ್ರಹವನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ಬಾಲಕನ ಜೀವ ಉಳಿಸಿದ್ದಾರೆ.
ಎಕ್ಸ್ರೇ ಮಾಡಿದ ವೇಳೆ ಗಂಟಲಿನಲ್ಲಿ ಇದ್ದ ವಿಗ್ರಹ ಹೊಟ್ಟೆಯ ಭಾಗಕ್ಕೆ ಹೋಗಿತ್ತು. ನಂತರ ಎಂಡೋಸ್ಕೋಪಿನ ಮೂಲಕ ಹೊರತೆಗೆಯಲು ಪ್ರಯತ್ನಿಸಲಾಯಿತು. ಅನ್ನನಾಳದಲ್ಲಿ ವಿಗ್ರಹ ಸಿಕ್ಕಿಕೊಂಡ ಕಾರಣ ಆ ವಿಗ್ರಹವನ್ನು ತೆಗೆಯುವುದು ಕಷ್ಟವಾಗಿತ್ತು. ನಂತರ ಹೊಟ್ಟೆ ಭಾಗಕ್ಕೆ ತಂದು ಎಂಡೋಸ್ಕೋಪಿ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಬಾಲಕ ಆರೋಗ್ಯವಾಗಿದ್ದಾನೆ.
"ಮಕ್ಕಳು ಆಟ ಆಡುವ ವೇಳೆ ಸಣ್ಣ ವಸ್ತುಗಳನ್ನು ನೀಡಬಾರದು. ಮಕ್ಕಳ ಆಡುವಾಗ ಪೋಷಕರು ಎಚ್ಚರಿಕೆ ವಹಿಸಬೇಕು" ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.