ನವದೆಹಲಿ, ಜು 24 (DaijiworldNews/PY): ಬಾಂಗ್ಲಾದೇಶಕ್ಕೆ 10 ಕಂಟೇನರ್ಗಳಲ್ಲಿ 200 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಕ್ಸಿಜನ್ ಅನ್ನು ಆಕ್ಸಿಜನ್ ಎಕ್ಸ್ಪ್ರೆಸ್ ಮೂಲಕ ಮೊದಲ ಬಾರಿಗೆ ಸಾಗಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ.
"ಭಾರತೀಯ ರೈಲ್ವೆ ಆಕ್ಸಿಜನ್ ಎಕ್ಸ್ಪ್ರೆಸ್ ಮೂಲಕ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳಸಲು ತಯಾರಾಗಿದೆ. ನೆರೆಯ ದೇಶಕ್ಕೆ ಆಕ್ಸಿಜನ್ ಎಕ್ಸ್ಪ್ರೆಸ್ ಅನ್ನು ಕಾರ್ಯರೂಪಕ್ಕೆ ತಂದಿರುವುದು ಇದೇ ಮೊದಲ ಬಾರಿಗೆ. ಆಗ್ನೇಯ ರೈಲ್ವೆಯ ಅಡಿಯಲ್ಲಿ ಚಕ್ರಧಪುರ ವಿಭಾಗದ ಟಾಟಾದಲ್ಲಿ ಇಂದು ಇಂಎಂಟ್ ಇಡಲಾಗಿದೆ. ಬಾಂಗ್ಲಾದೇಶದ ಬೆನಾಪೋಲ್ಗೆ 200 ಮೆಟ್ರಿಕ್ ಟನ್ ಎಲ್ಎಂಒ ಅನ್ನು ಸಾಗಿಸಲು" ಎಂದು ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇಂದು ಬೆಳಿಗ್ಗೆ 9.30 ರ ಸುಮಾರಿಗೆ ಎಲ್ಎಂಒ ಲೋಡಿಂಗ್ ಮಾಡಲಾಯಿತು. 35,000 ಮೆ.ಟನ್.ಗಿಂತ ಹೆಚ್ಚಿನ ಎಲ್ಎಂಒ ಅನ್ನು 15 ರಾಜ್ಯಗಳಿಗೆ ಸಾಗಿಸಲಾಯಿತು. ಸುಮಾರು 480 ಆಕ್ಸಿಜನ್ ಎಕ್ಸ್ಪ್ರೆಸ್ಗಳನ್ನು ಕಾರ್ಯಗತಗೊಳಿಸಲಾಯಿತು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಈ ಬಗ್ಗೆ ಲೋಕಸಭೆಗೆ ತಿಳಿಸಿದ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪವಾರ್, "ಕೊರೊನಾದ ಎರಡನೇ ಅಲೆಯ ವೇಳೆ ಭಾರತದಲ್ಲಿ ದ್ರವ ವೈದ್ಯಕೀಯ ಆಕ್ಸಿಜನ್ ಬೇಡಿಕೆಯು ಸುಮಾರು 9,000 ಮೆ.ಟನ್.ಗೆ ಹೆಚ್ಚಿತ್ತು. ಕೊರೊನಾದ ಮೊದಲ ಅಲೆಯ ಸಂದರ್ಭ 3,095 ಮೆ.ಟನ್ ಆಕ್ಸಿಜನ್ನ ಅವಶ್ಯಕತೆ ಇತ್ತು. ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕದ ಪೂರೈಕೆ ಸಂಬಂಧಪಟ್ಟ ಆಸ್ಪತ್ರೆ ಹಾಗೂ ಪೂರೈಕೆದಾರರ ನಡುವಿನ ಒಪ್ಪಂದದ ವ್ಯವಸ್ಥೆಯಿಂದ ತೀರ್ಮಾನಿಸಲಾಗುತ್ತದೆ. ಕೊರೊನಾದ ಎರಡನೇ ಅಲೆಯ ಸಂದರ್ಭ ದೇಶದಾದ್ಯಂತ ವೈದ್ಯಕೀಯ ಆಕ್ಸಿಜನ್ ಬೇಡಿಕೆ ಹೆಚ್ಚಾಗಿತ್ತು" ಎಂದಿದ್ದಾರೆ.