ಬೆಂಗಳೂರು, ,ಜು.24 (DaijiworldNews/HR): "ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದಾಗಿದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ" ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, "ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಮಹಿಳೆಯರು, ಮಕ್ಕಳು, ವೃದ್ಧರು, ವಿಕಲಚೇತನರ ಏಳಿಗೆಗಾಗಿ ನಾನು ನಿರಂತರ ಶ್ರಮಿಸುತ್ತಿದ್ದೇನೆ. ಕೊರೊನಾದ 2ನೇ ಅಲೆಯ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಉಂಟಾದ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಇಲಾಖೆ ವತಿಯಿಂದ ಅಗತ್ಯ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇನೆ" ಎಂದರು.
ಇನ್ನು ಯಡಿಯೂರಪ್ಪ ಅವರು ನೀಡಿರುವ ಅವಕಾಶದಲ್ಲಿ ನಾನು ಮಹಿಳೆಯರು ಮತ್ತು ಮಕ್ಕಳ ಏಳಿಗೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸಿ ನನ್ನನ್ನು ಆರೋಪಿತಳನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ವಾಹಿನಿಯಲ್ಲಿ ಪ್ರಸಾರಬಾಗುತ್ತಿರುವಂತೆ ಮೊಟ್ಟೆ ಖರೀದಿಗೆ ಇದುವರೆಗೂ ಯಾವದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ" ಎಂದಿದ್ದಾರೆ.
"ಮಹಿಳೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ರಾಜಕೀಯದಲ್ಲಿ ನನ್ನದೇ ಆದ ತತ್ವ ಸಿದ್ದಾಂತ ನಂಬಿಕೊಂಡು ಕೆಲಸ ಮಾಡುತ್ತಿರುವ ನನ್ನ ಏಳಿಗೆಯನ್ನು ಸಹಿಸಲು ಆಗದವರು ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ" ಎಂದು ಹೇಳಿದ್ದಾರೆ.