ಲಕ್ನೋ, ಜು 24 (DaijiworldNews/PY): ಬಂದೂಕಿನ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದ ಸಂದರ್ಭ ಗುಂಡು ಹಾರಿ 26 ವರ್ಷದ ನವವಿವಾಹಿತೆ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನ ಜೊತೆ ಸೆಲ್ಫಿ ಕ್ಲಿಕ್ಕಿಸುವ ವೇಳೆ ಈ ದುರಂತ ನಡೆದಿದೆ.
ಸೆಲ್ಫಿಗೆ ಪೋಸ್ ನೀಡುವ ವೇಳೆ ಬಂದೂಕಿನಲ್ಲಿ ಗುಂಡುಗಳು ತುಂಬಿರವುದು ರಾಧಿಕಾ ಗುಪ್ತಾ ಅವರಿಗೆ ತಿಳಿದಿರಲಿಲ್ಲ. ಹಾಗಾಗಿ ಅವರು ಬಂದೂಕಿನ ನಳಿಕೆಯನ್ನು ಎಳೆದಿದ್ದು, ಈ ಸಂದರ್ಭ ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅವರು ಆಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ರಾಧಿಕಾ ಅವರಿಗೆ ಆಕಾಶ್ ಗುಪ್ತಾ ಜೊತೆ ವಿವಾಹವಾಗಿತ್ತು ಎಂದು ಮಹಿಳೆಯ ಮಾವ ರಾಜೇಶ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಇದರಲ್ಲಿ ಏನೋ ಸಂಚು ನಡೆದಿದೆ ಎಂದು ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂದೂಕು ಹಾಗೂ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಗುಂಡು ಹಾರುವ ಮುನ್ನ ತೆಗೆದುಕೊಂಡಿದ್ದ ಸೆಲ್ಫಿ ಆ ಫೋನ್ನಲ್ಲಿ ಸಿಕ್ಕಿದೆ.