ಬೆಳಗಾವಿ, ಜು 24 (DaijiworldNews/PY): "ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ನಾಯಕತ್ವ ಬದಲಾವಣೆ ಮಾಧ್ಯಮಗಳ ಸೃಷ್ಟಿ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಯಕತ್ವ ಬದಲಾವಣೆ ವಿಚಾರವಾಗಿ ಪಕ್ಷದ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ಹಾಗಾಗಿ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ" ಎಂದಿದ್ದಾರೆ.
"ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದರೂ ಕೂಡಾ ದೊಡ್ಡ ಮಟ್ಟದ ಪ್ರವಾಹ ಬಂದಿಲ್ಲ. ಒಂದು ವೇಳೆ ಪ್ರವಾಹ ಬಂದರೂ ಕೂಡಾ ಎದುರಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
"ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ಪ್ರವಾಹ ತಗ್ಗಿಸಲು ಆಲಮಟ್ಟಿ ಜಲಾಶಯದಿಂದ ಮೂರು ಲಕ್ಷ ಕ್ಯೂಸೆಕ್ಸ್ ನೀರು ಬಿಡಲು ಸೂಚನೆ ನೀಡಲಾಗಿದೆ. ಜನರು ಆತಂಕಕ್ಕೆ ಒಳಗಾಗಬಾರದು. ನದಿಗಳ ಒಳಹರಿವು ಪ್ರಮಾಣ ಹೆಚ್ಚಿರುವ ಕಾರಣ ಜನರು ಸುರಕ್ಷಿತವಾದ ಸ್ಥಳಗಳಿಗೆ ತೆರಳಬೇಕು" ಎಂದಿದ್ದಾರೆ.