ಗುಜರಾತ್ , ಜು 24 (DaijiworldNews/MS): ಎಲ್ಪಿಜಿ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡು ಸಂಭವಿಸಿದ್ದ ಅವಘಡದ ನಂತರ ಏಳು ಜನರು ಸುಟ್ಟ ಗಾಯಗಳಿಗೆ ಸಾವನ್ನಪ್ಪಿರುವ ಘಟನೆ ಗುಜರಾತ್ನ ಅಹಮದಾಬಾದ್ ನಗರದ ಹೊರವಲಯದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ರಾತ್ರಿ (ಜುಲೈ 20) ನಡೆದಿದ್ದು ಈ ಅವಘಡದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬದವರು ಸೇರಿ 10 ಜನರಿಗೆ ಗಾಯಗಳಾಗಿದ್ದವು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಏಳು ಜನರು ಮೃತಪಟ್ಟಿದ್ದಾರೆ' ಎಂದುಅಹಮದಾಬಾದ್ ಗ್ರಾಮೀಣ ಪ್ರದೇಶ ಅಸ್ಲಾಲಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಎಸ್.ಎಸ್ ಗಾಮೆಟಿ ಶುಕ್ರವಾರ ವಿವರಿಸಿದ್ದಾರೆ.
'ಕಾರ್ಖಾನೆಯೊಂದರ ಕೆಲವು ಕಾರ್ಮಿಕರು ಮತ್ತು ಅವರ ಕುಟುಂಬದವರು ಸಣ್ಣ ಕೊಠಡಿಯೊಂದರಲ್ಲಿ ಮಲಗಿದ್ದರು. ಈ ವೇಳೆ ಎಲ್ಪಿಜಿ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿದೆ. ಈ ಬಗ್ಗೆ ಎಚ್ಚರಿಕೆ ನೀಡಲು ನೆರೆ ಮನೆಯವರು ಬಾಗಿಲು ತಟ್ಟಿದ್ಧಾರೆ. ಈ ವೇಳೆ ಕಾರ್ಮಿಕರು ಲೈಟ್ ಸ್ವಿಚ್ ಆನ್ ಮಾಡಿದ್ದರಿಂದ ಅನಿಲ ತುಂಬಿದ ಕೊಠಡಿಯಲ್ಲಿ ಸ್ಪೋಟ ಸಂಭವಿಸಿದೆ ' ಆ ಸಮಯದಲ್ಲಿ ಹತ್ತು ಜನರು ಅಲ್ಲಿ ಮಲಗಿದ್ದರು ಮತ್ತು ಕೋಣೆಯಲ್ಲಿ ಬೆಂಕಿ ಆವರಿಸಿದ್ದರಿಂದ ಅವರೆಲ್ಲರಿಗೂ ತೀವ್ರವಾದ ಸುಟ್ಟ ಗಾಯಗಳಾಗಿವೆ.
ಗುರುವಾರದಂದು ಮೂವರು ಸಾವನ್ನಪ್ಪಿದ್ದರೆ, ಇತರ ನಾಲ್ವರು ಶುಕ್ರವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.