ಕಲಬುರಗಿ, ಜು.24 (DaijiworldNews/HR): "ಕರ್ನಾಟಕದಲ್ಲಿ 120 ಜನ ಬಿಜೆಪಿ ಶಾಸಕರಿದ್ದು, ಇದರಲ್ಲಿ ಯಾರು ಮುಖ್ಯಮಂತ್ರಿಗಳು ಆಗಬೇಕೆಂಬುವುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ" ಎಂದು ಭೂ ಮತ್ತು ಗಣಿ ವಿಜ್ಞಾನ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮರುಗೇಶ ನಿರಾಣಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿ.ಎಸ್.ಯಡಿಯೂರಪ್ಪನವರ ಅಧಿಕಾರಾವಧಿ ಎರಡು ವರ್ಷ ಅಂತಾ ಮೊದಲೇ ನಿರ್ಧಾರವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಾಗೆ ನನ್ನನ್ನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮಾಧ್ಯಮಗಳೇ ಸೃಷ್ಟಿಸಿದ್ದು, ನಾನು ಲಾಬಿ ಮೂಲಕ ಮುಖ್ಯಮಂತ್ರಿ ಮಾಡಿ ಎಂದು ಕೇಳಲು ಹೋಗುವುದಿಲ್ಲ. ಮುಖ್ಯಮಂತ್ರಿ ಆಯ್ಕೆ ನಿರ್ಧಾರ ಪಕ್ಷದ ಹೈಕಮಾಂಡ್ ಗೆ ಸೇರಿದ್ದು, ಯಾವ ಮಾನದಂಡದ ಮೇಲೆ ಅವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕೂಡ ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ" ಎಂದರು.
ಇನ್ನು "ರಾಜ್ಯದಲ್ಲಿ ಪ್ರವಾಹ ಎದುರಿಸಲು ಸರ್ಕಾರದ ಅಗತ್ಯ ಸಿದ್ಧತೆಯಲ್ಲಿ ಇದ್ದು, ಸದ್ಯ ಕೆಲ ಭಾಗಗಳಲ್ಲಿ ಮಾತ್ರ ಪ್ರವಾಹ ಪರಿಸ್ಥಿತಿ ಕಂಡುಬರುತ್ತದೆ. ಹೀಗಾಗಿ ಪ್ರವಾಹ ಮತ್ತು ಜಲಾಶಯಗಳ ಮೇಲೆ ನಿಗಾ ವಹಿಸಲಾಗುತ್ತಿದೆ" ಎಂದಿದ್ದಾರೆ.
"ರಾಜ್ಯದಲ್ಲಿ ಮಳೆ ಇನ್ನೂ ಮುಂದುವರೆಯುವ ಸಾಧ್ಯತೆ ಇದ್ದು, ಈಗಾಗಲೇ ಮಳೆಯಿಂದ ಹಾನಿಯಾದ ಬೆಳೆ ಸಮೀಕ್ಷೆಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಲಾಗುತ್ತದೆ" ಎಂದು ತಿಳಿಸಿದರು.