ಬೆಂಗಳೂರು, ಜು 24 (DaijiworldNews/MS):ಸಚಿವೆ ಶಶಿಕಲಾ ಜೊಲ್ಲೆಯವರ ಮೊಟ್ಟೆ ಟೆಂಡರ್ ಕಿಕ್ ಬ್ಯಾಕ್ ಬೇಡಿಕೆ ಇಡುವ ಹಗರಣವೂ ಖಾಸಗಿ ವಾಹಿನಿಯೊಂದು ಬಯಲು ಮಾಡಿದೆ. ಈ ವಿಚಾರ ಹೊರಬರುತ್ತಿದ್ದಂತೆ ಕಾಂಗ್ರೆಸ್ ಕಿಡಿಕಾರಿದ್ದು, ಸೊರಗಿದ ಮಕ್ಕಳ ಪಾಲಿನ ಮೊಟ್ಟೆ ತಿಂದು ಭ್ರಷ್ಟ ಬಿಜೆಪಿ ಕೊಬ್ಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸರ್ಕಾರ 'ದಿನಕ್ಕೊಂದು ಭ್ರಷ್ಟಾಚಾರ' ಯೋಜನೆ ಹಾಕಿಕೊಂಡಿದ್ದರ ಭಾಗವಾಗಿ ಈಗ ಸಚಿವೆ ಶಶಿಕಲಾ ಜೊಲ್ಲೆಯವರ ಮೊಟ್ಟೆ ಟೆಂಡರ್ ಕಿಕ್ ಬ್ಯಾಕ್ ಬೇಡಿಕೆ ಇಡುವ ಹಗರಣ ಬಯಲಾಗಿದೆ.
ಸರ್ಕಾರಕ್ಕೆ ಸ್ವಲ್ಪವಾದರೂ ಮರ್ಯಾದೆ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆದು, ಹಗರಣವನ್ನು ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದೆ.
ಸತ್ತವರ ಹಣವನ್ನೂ ಬಿಡದ ಬಿಜೆಪಿ ಬದುಕಿದವರ ಹಣ ಬಿಡುವುದೇ! ನೆರೆ ಸಂತ್ರಸ್ತರ ಪರಿಹಾರ ಹಣವನ್ನ ನುಂಗಿದರು, ಕರೋನಾ ಹೆಸರಲ್ಲೂ ಲೂಟಿ ಹೊಡೆದರು. ಈಗ ನಿರ್ಗತಿಕ ಮುಗ್ದ ಮಕ್ಕಳ ಪೌಷ್ಟಿಕ ಆಹಾರದಲ್ಲೂ ಭ್ರಷ್ಟಾಚಾರ ನಡೆಸಿದ್ದು ಅಕ್ಷಮ್ಯವಾದುದು.ಸೊರಗಿದ ಮಕ್ಕಳ ಪಾಲಿನ ಮೊಟ್ಟೆ ತಿಂದು ಭ್ರಷ್ಟ ಬಿಜೆಪಿ ಕೊಬ್ಬುತ್ತಿದೆ.
ಕರೋನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂದು ತಜ್ಞರು ಹಲವು ಬಾರಿ ಎಚ್ಚರಿಸಿದ್ದರೂ, ಬಿಜೆಪಿ ಸರ್ಕಾರ ರಾಜ್ಯದ ಮಕ್ಕಳಿಗೆ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಮಕ್ಕಳನ್ನು ಸದೃಢಗೊಳಿಸಿಬೇಕಾದ ಸರ್ಕಾರ ಅವರ ತಟ್ಟೆಗೇ ಬಾಯಿ ಹಾಕಿ ಮೊಟ್ಟೆಗಳನ್ನ ನುಂಗಿದೆ! ಎಂದು ಆಕ್ರೋಶ ವ್ಯಕ್ತಪಡಿಸಿದೆ.