ಬೆಂಗಳೂರು,ಜು 24 (DaijiworldNews/MS): ಕೊರೊನಾ ಹಿನ್ನಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನ ಅವಕಾಶ ಕಲ್ಪಿಸಲಾಗಿದ್ದರೂ ಸೇವೆಗಳು, ಪ್ರಸಾದ ವಿನಿಯೋಗಕ್ಕೆ ಅವಕಾಶ ಇರಲಿಲ್ಲ. ಇದೀಗ ರಾಜ್ಯ ಸರ್ಕಾರ ಜುಲೈ 25ರಿಂದ ಪ್ರಸಾರ ವಿನಿಯೋಗ ಆರಂಭಿಸಲು ಒಪ್ಪಿಗೆ ನೀಡಲಾಗಿದೆ.
ಪ್ರಸಾದ, ಸೇವೆಗಳನ್ನು ಆರಂಭಿಸಲು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿ ಈ ಕುರಿತು ಮನವಿ ಮಾಡಿದ್ದರು. ಇದೀಗ ಈ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ.
ಜುಲೈ 25ರಿಂದ ರಾಜ್ಯದಾದ್ಯಂತ ದೇವಾಲಯಗಳಲ್ಲಿ ಪೂಜಾದಿ ಸೇವೆ ಮತ್ತು ಪ್ರಸಾದ ವಿತರಣೆಗೆ ಅವಕಾಶ ನೀಡಲಾಗುತ್ತದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.