ನವದೆಹಲಿ, ಜು 24 (DaijiworldNews/PY): "ಇಯರ್ ಬಡ್ಸ್, ಐಸ್ ಕ್ರೀಂ, ಕ್ಯಾಂಡಿ ಹಾಗೂ ಬಲೂನ್ಗಳಲ್ಲಿ ಬಳಸುವ ಪ್ಲಾಸ್ಟಿಕ್ ಕಡ್ಡಿಗಳನ್ನು 2022 ರ ಜನವರಿ 1 ರಿಂದ ಹಂತ ಹಂತವಾಗಿ ಬ್ಯಾನ್ ಮಾಡಲಾಗುವುದು" ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಅಶ್ವಿನಿ ಚೌಬೆ, "ಈ ವರ್ಷದ ಆರಂಭದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಒಂದು ಸಲ ಬಳಕೆಯಾದ ಪ್ಲಾಸ್ಟಿಕ್ ವಸ್ತುಗಳ ತಯಾರಿ, ಆಮದು, ವಿತರಣೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲು ಉದ್ದೇಶಿಸಲಾಗಿದೆ. ಇದು 2022ರ ಜನವರಿ 1ರಿಂದ ಜಾರಿಗೆ ಬರಲಿದೆ" ಎಂದಿದ್ದಾರೆ.
"ಪ್ಲಾಸ್ಟಿಕ್ ಕಡ್ಡಿಗಳಿರುವ ಇಯರ್ ಬಡ್ಗಳು, ಬಲೂನ್, ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಅಲಂಕಾರಕ್ಕಾಗಿ ಬಳಸುವ ಕ್ಯಾಂಡಿ ಸ್ಟಿಕ್ಹಳು, ಐಸ್ ಕ್ರೀಂ ಸ್ಟಿಕ್ಗಳು, ಅಲಂಕಾರಿಕ ಥರ್ಮಕೋಲ್ ಅನ್ನು ಜನವರಿ 1 ರೊಳಗೆ ಹಂತಹಂತವಾಗಿ ಹೊರಹಾಕಲು ಪ್ರಸ್ತಾಪಿಸಲಾಗಿದೆ. ಮುಂದಿನ ವರ್ಷದ ಜುಲೈನಿಂದ ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್, ಗ್ಲಾಸ್, ಚಮಚ, ಚಾಕು, ಸ್ಟ್ರಾ, 100 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಮತ್ತು ಪಿವಿಸಿ ಬ್ಯಾನರ್ ಗಳನ್ನು ನಿಷೇಧಿಸಲಾಗುತ್ತದೆ" ಎಂದಿದ್ದಾರೆ.
"ಕಾಂಪೋಸ್ಟಬಲ್ ಪ್ಲಾಸ್ಟಿಕ್ ವಸ್ತುಗಳಿಂದ ಮಾಡಿದ ಸರಕುಗಳಿಗೆ (ಕ್ಯಾರಿ ಬ್ಯಾಗ್ ಗಳು ಸೇರಿದಂತೆ) ಈ ನಿಬಂಧನೆಗಳು ಅನ್ವಯಿಸುವುದಿಲ್ಲ" ಎಂದು ಹೇಳಿದ್ದಾರೆ.