ಬೆಂಗಳೂರು, ಜು 24 (DaijiworldNews/PY): "ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ರಾಜ್ಯಾದ್ಯಂತ ಜುಲೈ 27ರವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ" ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಗೆ ಮೂರು ಮಂದಿ ಸಾವನ್ನಪ್ಪಿದ್ದಾರೆ. ಎಂಟು ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದು, ಸುಮಾರು 900 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಕನ್ನಡ ಸೇರಿದಂತೆ ಉಡುಪಿ, ಶಿವಮೊಗ್ಗ, ಕೊಡಗು, ಹಾಸನ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
ಮುಂದಿನ ಐದು ದಿನ ಮಳೆ ಮುಂದುವರಿಯಲಿದೆ. ಜುಲೈ 25 ರಿಂದ 27ರವರೆಗೆ ಕೆಲವು ಕಡೆಗಳಲ್ಲಿ ಮಾತ್ರವೇ ಮಳೆಯಾಗಲಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
"ಧಾರವಾಡ ಸೇರಿದಂತೆ ಬೆಳಗಾವಿ, ಕಲಬುರಗಿ, ಯಾದಗಿರಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಜುಲೈ 24ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ" ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.