ಬೆಂಗಳೂರು, ಜು. 23 (DaijiworldNews/SM): ಅತಿವೃಷ್ಟಿಯಾಗುತ್ತಿರುವ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಹಾಗೂ ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವೀಡಿಯೋ ಸಂವಾದ ನಡೆಸಿದರು.
ಈ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಿಂದ ತಲೆದೋರಿರುವ ಪ್ರವಾಹ ಪರಿಸ್ಥಿತಿ ಹಾಗೂ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮುಖ್ಯಮಂತ್ರಿ ಮಾಹಿತಿ ಪಡೆದರು.
ಪ್ರವಾಹ ಪೀಡಿತ ಗ್ರಾಮಗಳ ಗ್ರಾಮಸ್ಥರನ್ನು ಶೀಘ್ರವೇ ಸ್ಥಳಾಂತರಗೊಳಿಸುವಂತೆ ಡಿಸಿ ಸೂಚನೆ ನೀಡಿದರು. ಅಲ್ಲದೆ, ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಹಾಗೂ ಪ್ರವಾಹ ಉಂಟಾಗುವ ಸಾದ್ಯತೆ ಇರುವ ಗ್ರಾಮಗಳನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ಅಗತ್ಯವಿದ್ದಲ್ಲಿ ಎನ್ ಡಿಅರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳನ್ನು ತುರ್ತು ಕಳುಹಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.