ಬೆಂಗಳೂರು, ಜು 23 (DaijiworldNews/PY): "ಜನರ ಬಳಿಗೆ ಓಡಬೇಕಿರುವ ಈ ಸಂದರ್ಭದಲ್ಲಿ ದೆಹಲಿಗೆ ಓಡುತ್ತಿದ್ದಾರೆ ಬಿಜೆಪಿ ನಾಯಕರು" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯಕ್ಕೆ ಗಂಡಾಂತರ ಎದುರಾದಾಗಲೆಲ್ಲಾ ಬಿಜೆಪಿ ಸರ್ಕಾರದ ಕಚ್ಚಾಟ ತಾರಕಕ್ಕೇರುತ್ತದೆ. ನೆರೆಯಿಂದಾಗಿ ಜನರ ಆಸ್ತಿಪಾಸ್ತಿ ಹಾಳಾಗಿದೆ, ಮನೆಗಳನ್ನ ಕಳೆದುಕೊಂಡಿದ್ದಾರೆ, ರೈತರ ಪಾಡು ಇನ್ನೂ ಭೀಕರ, ಬಹುತೇಕ ಎಲ್ಲಾ ಬಗೆಯ ಬೆಳೆಗಳೂ ನಷ್ಟಗೊಂಡಿದೆ. ಜನರ ಬಳಿಗೆ ಓಡಬೇಕಿರುವ ಈ ಸಂದರ್ಭದಲ್ಲಿ ದೆಹಲಿಗೆ ಓಡುತ್ತಿದ್ದಾರೆ ಬಿಜೆಪಿ ನಾಯಕರು" ಎಂದು ಲೇವಡಿ ಮಾಡಿದೆ.
"ಮನುವಾದಿ ಬಿಜೆಪಿ ತನ್ನಲ್ಲಿರುವ ದಲಿತರನ್ನು ಕಾಲಾಳುಗಳಂತೆ ಬಳಸಿಕೊಂಡಿತೇ ಹೊರತು ನಾಯಕರಾಗಿ ಬೆಳೆಯಲು ಬಿಡಲೇ ಇಲ್ಲ. ಬಿಜೆಪಿ ದಲಿತರನ್ನು ಸಿಎಂ ಮಾಡುವುದು ಕನಸಿನ ಮಾತು, ಕನಿಷ್ಠ ಪಕ್ಷ ಸಿಎಂ ಹುದ್ದೆಯ ರೇಸ್ನಲ್ಲಿಯೂ ಇಲ್ಲದಿರುವುದು ಬಿಜೆಪಿಯಲ್ಲಿ ದಲಿತ ನಾಯಕರಿಗೆ ಸ್ವತಂತ್ರವಿಲ್ಲದಂತಿರುವುದಕ್ಕೆ ಸಾಕ್ಷಿ" ಎಂದಿದೆ.
"ಬಿ.ಎಸ್.ಯಡಿಯೂರಪ್ಪ ನಂತರ ಯಾರು ಮುಂದಿನ ಸಿಎಂ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಹೆಸರುಗಳ ಹಿಡಿದುಕೊಂಡು ಮಾಧ್ಯಮಗಳು ವಿಶ್ಲೇಷಿಸುತ್ತಿವೆ, ಆ ಹೆಸರುಗಳಲ್ಲಿ ಒಬ್ಬರೇ ಒಬ್ಬರ ದಲಿತರ ಹೆಸರಿಲ್ಲ, ಹಿಂದುಳಿದವರ ಹೆಸರಿಲ್ಲ.ಬಿಜೆಪಿ ಪಕ್ಷದಲ್ಲಿ ದಲಿತ, ಹಿಂದುಳಿದವರನ್ನು ನಾಯಕರಾಗಿ ಬೆಳೆಯಲು ಬಿಡದೆ ಅದುಮಿಡಲಾಗಿದೆ" ಎಂದು ಹೇಳಿದೆ.