ಕೊಲ್ಲಂ.ಜು.23 (DaijiworldNews/HR): ತನ್ನ 105ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಳಿಸಿದ್ದ, 'ನಾರಿಶಕ್ತಿ' ಪ್ರಶಸ್ತಿ ಪುರಸ್ಕೃತೆ, ಕೇರಳದ 'ಹಿರಿಯ ವಿದ್ಯಾರ್ಥಿ' ಭಾಗೀರಥಿ ಅಮ್ಮ(107) ನಿಧನರಾಗಿದ್ದಾರೆ.
ಶತಾಯುಷಿ ಭಾಗೀರಥಿ ಅಮ್ಮ ಅವರು 2019ರಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ನಾಲ್ಕನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 275 ಅಂಕಗಳಿಗೆ 205 ಅಂಕಗಳನ್ನು ಪಡೆದಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆದು ಹೆಸರುಗಳಿಸಿದ್ದರು.
ಇನ್ನು ತನ್ನ ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಭಾಗೀರಥಿಯವರು, ಕುಟುಂಬ ನಿರ್ವಹಣೆಗಾಗಿ, ಮೂರನೇ ವಯಸ್ಸಿಗೆ ಓದನ್ನು ಮೊಟಕುಗೊಳಿಸಿದ್ದರು. ಓದು, ಅಧ್ಯಯನಕ್ಕಾಗಿ ಹಂಬಲಿಸುತ್ತಿದ್ದ ಅವರಿಗೆ ಕೊನೆಗೂ ಶಿಕ್ಷಣ ಮುಂದುವರಿಸಲು ಅವಕಾಶವೇ ಸಿಗಲಿಲ್ಲ. ಅಮ್ಮನಿಗೆ ಅಧ್ಯಯನದ ಬಗೆಗಿರುವ ಉತ್ಸಾಹವನ್ನು ಕಂಡ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದರು.
ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ತೋರಿದ್ದಕ್ಕಾಗಿ, ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಾಗಿ ಭಾಗೀರಥಿ ಅಮ್ಮನವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ 'ನಾರಿಶಕ್ತಿ' ಪುರಸ್ಕಾರ ನೀಡಿ ಗೌರವಿಸಿದೆ.