ಮಹಾರಾಷ್ಟ್ರ, ಜು 23 (DaijiworldNews/PY): ವರದಕ್ಷಿಣೆ ರೂಪದಲ್ಲಿ 21 ಆಮೆ, ಕಪ್ಪು ಲ್ಯಾಬ್ರಾಡರ್ ಹಾಗೂ 10 ಲಕ್ಷ ಕೇಳಿದ್ದ ಮಹಾರಾಷ್ಟ್ರದ ವ್ಯಕ್ತಿಯ ವಿರುದ್ದ ಎಫ್ಐಆರ್ ದಾಖಲಾಗಿದೆ.
ವಧುವಿನ ಕುಟುಂಬವು ಬೇಡಿಕೆಗಳನ್ನು ಪೂರೈಸಲು ಅಸಾಹಯಕತೆ ವ್ಯಕ್ತಪಡಿಸಿದ ಬಳಿಕ ಆರೋಪಿ ವಿವಾಹವನ್ನು ರದ್ದುಗೊಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಫೆಬ್ರವರಿಯಲ್ಲಿ ನಿಶ್ಚಿತಾರ್ಥದ ಮುನ್ನ ವಧುವಿನ ಕುಟುಂಬವು 2 ಲಕ್ಷ ನಗದು, 10 ಗ್ರಾಂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಇದಾದ ಬಳಿಕ ವಿವಾಹದ ತಯಾರಿ ನಡೆಯುತ್ತಿತ್ತು. ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ವರ ತನ್ನ ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾನೆ.
ತನಗೆ 21 ಆಮೆಗಳು, ಒಂದು ಕಪ್ಪು ಬಣ್ಣದ ಲ್ಯಾಬ್ರಾಡರ್ ನಾಯಿ, ಬುದ್ದನ ಗೊಂಬೆ ಹಾಗೂ ರಾಬಿಟ್ ಲ್ಯಾಂಪ್ ನೀಡಬೇಕು ಎಂದು ಕೇಳಿದ್ದಾನೆ. ಇಷ್ಟನ್ನು ನನಗೆ ನೀಡಿದರೆ ವಿವಾಹವಾದ ಬಳಿಕ ನಿಮ್ಮ ಮಗಳಿಗೆ ಉತ್ತಮ ಕೆಲಸ ದೊರಕುತ್ತದೆ ಎಂದು ನಂಬಿಸಿದ್ದಾನೆ.
ವರನ ವಿಚಿತ್ರ ಬೇಡಿಕೆ ಕೇಳಿದ ವಧುವಿನ ಕುಟುಂಬಕ್ಕೆ ಶಾಕ್ ಆಗಿದ್ದು, ಬಳಿಕ ವಧುವಿನ ಮನೆಯವರು ವರನ ಬೇಡಿಕೆಯನ್ನು ಈಡೇರಿಸಲು ಯತ್ನಿಸುತ್ತಾರೆ. ಆದರೆ, ವಧುವಿನ ಕುಟುಂಬವು ಬೇಡಿಕೆಗಳನ್ನು ಪೂರೈಸಲು ಅಸಹಾಯಕತೆ ವ್ಯಕ್ತಪಡಿಸಿದೆ. ಇದನ್ನು ತಿಳಿದ ವರ ವಿವಾಹ ಆಗುವುದಿಲ್ಲ ಎಂದಿದ್ದಾನೆ. ಈ ಬಗ್ಗೆ ಏನು ಮಾಡಬೇಕು ಎಂದು ತಿಳಿಯದ ವಧುವಿನ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರೋಪಿಯ ವಿರುದ್ದ ಎಫ್ಐಆರ್ ದಾಖಲಿಸಿದ್ದೇವೆ. ತನಿಖೆ ಕೈಗೊಂಡಿದ್ದೇವೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಾಧನಾ ಅವಾದ್ ಹೇಳಿದ್ದಾರೆ.