ನವದೆಹಲಿ, ಜು 23 (DaijiworldNews/PY): "ನಮ್ಮ ದೇಶ ಹಾಗೂ ದೇಶದೊಳಗಿನ ಸಂಸ್ಥೆಗಳ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪೆಗಾಸಸ್ ತಂತ್ರಾಂಶದ ಮುಖೇನ ಬೇಹುಗಾರಿಕೆ ನಡೆಸುತ್ತಿದ್ದಾರೆ. ಇದಕ್ಕೆ ದೇಶದ್ರೋಹ ಎನ್ನುವ ಬದಲು ಬೇರೆ ಪದ ಬಳಕೆ ಸೂಕ್ತವಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.
ವಿಜಯ್ ರ್ಚಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆ"ಗಾಸಸ್ ಗೂಢಚರ್ಯೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವೀಚಾರಣೆಯಲ್ಲಿ ತನಿಖೆ ನಡೆಸಬೇಕು. ಗೃಹಸಚಿವರು ಕೂಡಲೇ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
"ಪೆಗಾಸಸ್ ಅನ್ನು ಇಸ್ರೇಲ್ ದೇಶದಲ್ಲಿ ಭಯೋತ್ಪಾದನೆ ನಿಗ್ರಹ ಹಾಗೂ ದೇಶದ ರಕ್ಷಣೆಗಾಗಿ ಬಳಸಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಈ ಶಸ್ತ್ರಾಸ್ತ್ರವನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶ ಹಾಗೂ ದೇಶದೊಳಗಿನ ಸಂಸ್ಥೆಗಳ ವಿರುದ್ದ ಉಪಯೋಗಿಸುತ್ತಿದ್ದಾರೆ. ಅಲ್ಲದೇ, ಪೆಗಾಸಸ್ ಅನ್ನು ರಾಜಕೀಯವಾಗಿಯೂ ಕೂಡಾ ಉಪಯೋಗಿಸಿಕೊಂಡಿದ್ದಾರೆ. ಇದು ಕರ್ನಾಟಕದ ರಾಜಕೀಯದಲ್ಲಿಯೂ ಬಳಕೆಯಾಗಿದೆ" ಎಂದಿದ್ದಾರೆ.
"ನನ್ನ ಎಲ್ಲಾ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದ್ದು, ನನ್ನ ಸ್ನೇಹಿತರಿಗೆ ಈ ಬಗ್ಗೆ ಗುಪ್ತಚರ ಮಾಹಿತಿ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.