ಚಂಡೀಗಡ, ಜು.23 (DaijiworldNews/HR): ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಉಪಸ್ಥಿತಿಯಲ್ಲಿ ಶುಕ್ರವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಸಿಧು, "ಪಕ್ಷದ ಸಾಮಾನ್ಯ ಕಾರ್ಯಕರ್ತ ಮತ್ತು ರಾಜ್ಯ ಘಟಕದ ಅಧ್ಯಕ್ಷರ ನಡುವೆ ಯಾವುದೇ ವ್ಯತ್ಯಾಸ ಇಲ್ಲ"ಎಂದು ಹೇಳಿದ್ದಾರೆ.
ಇನ್ನು ಸಿಧು ಹಾಗೂ ಅಮರಿಂದರ್ ನಡುವಣ ಭಿನ್ನಾಭಿಪ್ರಾಯವು ಕಾಂಗ್ರೆಸ್ ಆಂತರಿಕ ಕಲಹಕ್ಕೆ ಕಾರಣವಾಗಿದ್ದು, ಸಿಧು ಅವರು ಟ್ವೀಟ್ ಮೂಲಕ ಅಮರಿಂದರ್ ಸಿಂಗ್ ವಿರುದ್ಧ ಕಟುವಾಗಿ ಟೀಕಿಸಿದ್ದರು. ಇದರಿಂದಾಗಿ ಸಿಧು ಸಾರ್ವಜನಿಕವಾಗಿ ಕ್ಷಮೆಯಾಚಿಸದ ಹೊರತು ಅಮರಿಂದರ್ ಭೇಟಿಯಾಗುವುದಿಲ್ಲ ಎಂದು ಸಿಎಂ ಮಾಧ್ಯಮ ಸಲಹೆಗಾರ ಹೇಳಿಕೆ ನೀಡಿದ್ದರು.
ರಾಜ್ಯ ಕಾಂಗ್ರೆಸ್ ಘಟಕಕ್ಕೆ ಹೊಸದಾಗಿ ನೇಮಕಗೊಂಡ ನಾಲ್ವರು ಕಾರ್ಯಾಧ್ಯಕ್ಷರ ಪೈಕಿ ಕುಲ್ಜಿತ್ ಸಿಂಗ್ ನಾಗ್ರಾ ಮತ್ತು ಸಂಗತ್ ಸಿಂಗ್ ಗಿಲ್ಜಿಯಾನ್ ಅವರು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಅಮರಿಂದರ್ ಸಿಂಗ್ ಅವರನ್ನು ಆಹ್ವಾನಿಸಿದ್ದರು ಎನ್ನಲಾಗಿದೆ.