ಮಹಾದ್, ಜು 23 (DaijiworldNews/MS): ಎಡೆಬಿಡದೆ ಸುರಿಯುತ್ತಿರುವ ಮಹಾ ಮಳೆಯ ನಡುವೆ ಮಹಾರಾಷ್ಟ್ರದ ಕರಾವಳಿ ರಾಯಗಡ ಜಿಲ್ಲೆಯ ಹಳ್ಳಿಯೊಂದರ ಸಮೀಪ ಸಂಭವಿಸಿದ ಭೂಕುಸಿತದಲ್ಲಿ ಮೂವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮಹಾದ್ ತಹಸಿಲ್ನ ತಲೈ ಗ್ರಾಮದ ಸಮೀಪ ನಡೆದ ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದೆ. "ಭೂಕುಸಿತವಾದ ಸ್ಥಳದಿಂದ ಈಗಾಗಲೇ ಮೂವತ್ತಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಇನ್ನು ಹೆಚ್ಚಿನ ಜನರು ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್ಡಿಆರ್ಎಫ್ನ ತಂಡವು ಮುಂಬೈನಿಂದ 160 ಕಿ.ಮೀ ದೂರದಲ್ಲಿರುವ ಮಹಾದ್ ತಲುಪಿದೆ.ಇದೇ ವೇಳೆ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಅವರನ್ನ ಸಂಪರ್ಕಿಸಿ, ಎನ್ಡಿಆರ್ಎಫ್ ನೆರವನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರವಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಕರ್ನಾಟಕದಲ್ಲೂ ಹಲವೆಡೆ ಭಾರಿ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರು ಈ ಎರಡು ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಂದಿದೆ