ಬೆಂಗಳೂರು, ಜು 23 (DaijiworldNews/PY): ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಸವಾಲೆಸೆದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರು 'ದಲಿತ ಮುಖ್ಯಮಂತ್ರಿ' ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು 'ಕುಟುಂಬ ರಾಜಕಾರಣ'ದ ಬಗ್ಗೆ ಪ್ರವಚನ ನೀಡುವುದೂ ಒಂದೇ! ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ದಲಿತನೊಬ್ಬ ಸಿಎಂ ಆಗಬಾರದು ಎಂದು ಪರಮೇಶ್ವರ್ ಅವರನ್ನು ಸೋಲಿಸಿದ ಸಿದ್ದರಾಮಯ್ಯ, ಈಗ ದಲಿತ ಪ್ರೇಮ ತೋರ್ಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು 'ದಲಿತ ಮುಖ್ಯಮಂತ್ರಿ' ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು 'ಕುಟುಂಬ ರಾಜಕಾರಣ'ದ ಬಗ್ಗೆ ಪ್ರವಚನ ನೀಡುವುದೂ ಒಂದೇ! ಎಂದಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ದಲಿತರ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ದಲಿತ ಸಮುದಾಯಕ್ಕೆ ಸೇರಿದವರೇ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಘೋಷಿಸಿ. ಅದೆಲ್ಲ ಹೇಗೆ ಸಾಧ್ಯ, 'ನಾನೇ ಮುಂದಿನ ಸಿಎಂ' ಎಂದು ಹೇಳಿಸಿಕೊಳ್ಳುವುದರಲ್ಲೇ ನೀವು ಬ್ಯುಸಿ ಆಗಿದ್ದೀರಿ ಅಲ್ವೇ? ಎಂದು ಪ್ರಶ್ನಿಸಿದೆ.
"ರಾಜ್ಯದಲ್ಲಿ ದಲಿತ ಸಿಎಂ ವಾದವನ್ನು ಹತ್ತಿಕ್ಕಿದ್ದೇ ಸಿದ್ದರಾಮಯ್ಯ. ಖರ್ಗೆ ಸೋಲಿನಲ್ಲೂ ಸಿದ್ರಾಮಯ್ಯ ಕರಿನೆರಳಿತ್ತು. ಸಿಎಂ ಆಗಿದ್ದಾಗ ದಲಿತ ನಾಯಕ ಪರಮೇಶ್ವರರಿಗೆ ಕಣ್ಣೀರು ಹಾಕಿಸಿದ್ದ ಸಿದ್ದರಾಮಯ್ಯ ಈಗ ಬೇರೆಯವರಿಗೆ ಉಪದೇಶ ನೀಡುತ್ತಿದ್ದಾರೆ. ಅಧಿಕಾರ ಇದ್ದಾಗಲೆಲ್ಲಾ ದಲಿತರಿಗೆ ಮಾಡಿದ್ದು ಅನ್ಯಾಯವೇ!" ಎಂದು ಹೇಳಿದೆ.
"ಸಿದ್ದರಾಮಯ್ಯನವರೇ, ದಲಿತ ಶಾಸಕನ ಮನೆಗೆ ಬೆಂಕಿ ಹೆಚ್ಚಿದಾಗ ಮೌನ, ಡಾ.ಪರಮೇಶ್ವರ ಸೋಲಿಸಲು ಕುತಂತ್ರ, ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಈಗಲೇ ಸಿದ್ಧತೆ ನಿಮ್ಮಂತ ದಲಿತ ವಿದ್ರೋಹಿಗಳು ಬೇರೆ ಯಾರಾದರೂ ಇರಲು ಸಾಧ್ಯವೇ ಸಿದ್ದರಾಮಯ್ಯ?" ಎಂದು ಕೇಳಿದೆ.