ಬೆಂಗಳೂರು, ಜು 23 (DaijiworldNews/PY): ಕೊರೊನಾ ಹಿನ್ನೆಲೆ ಒಂದೂವರೆ ವರ್ಷದಿಂದ ಮುಚ್ಚಿರುವ ಶಾಲೆಗಳನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಕೊರೊನಾದ ಮೂರನೇ ಅಲೆಯ ಭೀತಿ ಹಿನ್ನೆಲೆ ಶಾಲೆಗಳ ಆರಂಭದ ಬಗ್ಗೆ ರಚನೆಯಾಗಿರುವ ತಜ್ಞರ ಸಮಿತಿ ವರದಿಯನ್ನು ನೀಡಿದೆ. ವರದಿಯನ್ನು ಜಾರಿಗೆ ತರಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಶುಕ್ರವಾರ ಶಿಕ್ಷಣ ಇಲಾಖೆ ಕರೆದಿರುವ ಸಭೆಯಲ್ಲಿ ಮಹತ್ವದ ನಿರ್ಧಾರ ತಿಳಿದು ಬರಲಿದೆ.
ಕೊರೊನಾದ ಮೂರನೇ ಅಲೆ ಭೀತಿಯ ಹಿನ್ನೆಲೆ ಜಾಗರೂಕವಾಗಿ ಶಾಲೆಗಳನ್ನು ಆರಂಭ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಹರ್ಯಾಣ ಸೇರಿಂದತೆ ಗುಜರಾತ್ ಹಾಗೂ ಹಲವು ರಾಜ್ಯಗಳಲ್ಲಿ ಈಗಾಗೇ ಶಾಲಾ-ಕಾಲೇಜುಗಳನ್ನು ತೆರೆಯಲಾಗಿದೆ. ಇನ್ನು ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಷರತ್ತುಗಳ ಆಧಾರದ ಮೇಲೆ ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಿದೆ. ಈಗ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ತೆರೆಯುವ ಬಗ್ಗೆ ಇಲಾಖಾ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಿದೆ.
ಕೊರೊನಾದ ಮೂರನೇ ಅಲೆ ಕೇವಲ ಮಕ್ಕಳನ್ನು ಮಾತ್ರವೇ ಗುರಿಯಾಗಿಸಿಕೊಂಡಿದೆ ಎನ್ನುವುದು ಸುಳ್ಳು ಎಂದು ಹಲವು ಸಂಶೋಧನಾ ಆಧಾರಿತ ವರದಿಗಳು ಹೊರ ಬಿದ್ದಿವೆ. ರಾಜ್ಯದಲ್ಲಿ ಶಾಲೆಗಳು ತೆರೆಯುವ ಸಂಬಂಧ ಪಾಲಕರು ಹಾಗೂ ಪೋಷಕರು ಒಳಗೊಂಡ ತಜ್ಞರ ತಂಡ ಸಮಿತಿ ಈಗಾಗಲೇ ಶಿಕ್ಷಣ ಇಲಾಖೆಯ ಅಯುಕ್ತರಿಗೆ ವರದಿ ಸಲ್ಲಿಸಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ತೆರೆಯಬಹುದು. ತಜ್ಞರ ಸಮಿತಿ, ಪ್ರಾಥಮಿಕ ಶಾಲೆಗಳನ್ನು ತೆರೆಯಲೂ ಶಿಫಾರಸ್ಸು ಮಾಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
"ಆಗಸ್ಟ್ ತಿಂಗಳಿನಿಂದ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲು ಅವಕಾಶ ಕಲ್ಪಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರುಪ್ಸಾ ಆಗ್ರಹಿಸಿದೆ. ಪ್ರಸ್ತುತ ಎಲ್ಲಾ ವಲಯಗಳ ಮೇಲಿನ ನಿರ್ಬಂಧ ಸಡಿಲಗೊಳಿಸಲಾಗಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಶಾಲೆಗಳನ್ನು ತೆರೆಯಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ, ಸ್ವತಃ ಶಾಲೆಗಳೇ ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಿ ಶಾಲೆ ಪ್ರಾರಂಭಿಸಬೇಕಾಗುತ್ತದೆ" ಎಂದು ರುಪ್ಸಾ ಮುಖ್ಯಸ್ಥೆ ಲೇಪಾಕ್ಷಿ ಹಾಗೂ ಶಶಿಧರ್ ದಿಂಡೂರ್ ಹೇಳಿದ್ದಾರೆ.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಮಕ್ಕಳು ಹದಿನಾಲ್ಕು ವರ್ಷದವರಗೂ ಕಡ್ಡಾಯ ಶಿಕ್ಷಣ ಪಡೆಯುವಂತಾಗಬೇಕು. ಕೊರೊನಾದಿಂದ ಮಕ್ಕಳ ಮೇಲೂ ಕೆಟ್ಟು ಪರಿಣಾಮ ಬೀರಿದೆ. ಈ ಹಿನ್ನೆಲೆ ಆಗಸ್ಟ್ ತಿಂಗಳಿನಲ್ಲಿ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
2019ರ ಡಿಸೆಂಬರ್ನಲ್ಲಿ ಚೀನಾದಲ್ಲಿ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಮಾರ್ಚ್ ತಿಂಗಳಿನ ವೇಳೆ ಭಾರತದಲ್ಲೂ ಕೊರೊನಾ ಕಾಣಿಸಿಕೊಳ್ಳಲು ಪ್ರಾರಂಭಿಸಿತು. 2019ರ ಮೇ ತಿಂಗಳಿನಲ್ಲಿ ಲಾಕ್ಡೌನ್ ಇದ್ದ ಕಾರಣ ಸ್ಥಗಿತಗೊಂಡ ಶಾಲೆಗಳನ್ನು ಮತ್ತೆ ತೆರೆಯಲು ಸಾಧ್ಯವಾಗಿಲ್ಲ. ಕಳೆದ ವರ್ಷ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದರೂ ಕೂಡಾ ಎರಡನೇ ತಿಂಗಳಿನಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಮಕ್ಕಳು ಒಂದೂವರೆ ವರ್ಷದಿಂದ ಶಾಲೆಗಳಿಂದ ದೂರ ಉಳಿದಿದ್ದಾರೆ. ಅಲ್ಲದೇ, ಮಕ್ಕಳ ದಾಖಲಾತಿ ಪ್ರಮಾಣದಲ್ಲೂ ಕೂಡಾ ಇಳಿಕೆಯಾಗಿದೆ.