ಬೆಂಗಳೂರು, ಜು 23 (DaijiworldNews/PY): "ಶಾಲೆಗಳನ್ನು ಯಾವುದೋ ಒಂದು ದಿನ ಪ್ರಾರಂಭಿಸಬೇಕಾಗುತ್ತದೆ. ಇದಕ್ಕೆ ತಯಾರಾಗಿ ಆದ್ಯತೆಯ ಮೇರೆಗೆ ಎಲ್ಲಾ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾವಾಗಲೂ ಮಕ್ಕಳು ಆನ್ಲೈನ್ ತರಗತಿ ಮುಂದೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಯಾವುದೋ ಒಂದು ದಿನ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ. ಆನ್ಲೈನ್ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಪರಿಣಿತರ ಅಭಿಪ್ರಾಯ, ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದಿದ್ದಾರೆ.
"ಶಾಲೆಯ ಸಿಬ್ಬಂದಿ ವರ್ಗವನ್ನು ವಿಶೇಷ ಗುಂಪಾಗಿ ಪರಿಗಣಿಸಿ ಎಲ್ಲರಿಗೂ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ನೀಡುವ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಲಾಗಿದೆ. ಅಲ್ಲದೇ ಮಕ್ಕಳ ಪೋಷಕರಿಗೆ ಹಾಗೂ ಕುಟುಂಬದವರಿಗೆ ಲಸಿಕೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು, "ವೈದ್ಯಕೀಯ ಶಿಕ್ಷಣ ಕಾಲೇಜುಗಳನ್ನು ನಡೆಸಲು ಅವಕಾಶ ನೀಡಲಾಗಿದ್ದು, ಉನ್ನತ ಶಿಕ್ಷಣದಲ್ಲಿ ಕಾಲೆಜು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ವಿಚಾರವಾಗಿ ಸಿಎಂ ಅವರೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧರಿಸಲಾಗುವುದು" ಎಂದಿದ್ದಾರೆ.