ಬೆಂಗಳೂರು, ಜು.22 (DaijiworldNews/HR): ಬಿ. ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿದರೆ ಏನೂ ನಷ್ಟವಿಲ್ಲ, ಯಾಕೆಂದರೆ ಕರ್ನಾಟಕದಲ್ಲಿ ಅಭಿವೃದ್ಧಿಪರ ಇಲ್ಲದಿರುವ ಅತ್ಯಂತ ಕೆಟ್ಟ ಭ್ರಷ್ಟ ಸರ್ಕಾರವನ್ನು ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಯಡಿಯೂರಪ್ಪನವರೇ ಭ್ರಷ್ಟ, ಅವರ ಮಗನೂ ಭ್ರಷ್ಟ, ಹಾಗಾಗಿ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರೆ ಬಹಳ ಒಳ್ಳೆಯದು. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ತೆಗೆಯುತ್ತಾರೆಂದು ಸುಮಾರು ಆರೇಳು ತಿಂಗಳಿನಿಂದ ಹೇಳುತ್ತಾ ಬಂದಿದ್ದೆ. ಅದನ್ನು ಯಾರೂ ನಂಬಿರಲಿಲ್ಲ. ನನಗೆ ಖಚಿತ ಮಾಹಿತಿ ಇತ್ತು, ಇವತ್ತು ಅದು ಸತ್ಯವಾಗಿದೆ" ಎಂದರು.
ಇನ್ನು ಬಿ,ಎಸ್ ಯಡಿಯೂರಪ್ಪನವರನ್ನು ತೆಗೆಯುವುದರಿಂದ ಬಿಜೆಪಿಯಲ್ಲಿ ಮತ್ತೊಬ್ಬ ಪ್ರಾಮಾಣಿಕ ಮುಖ್ಯಮಂತ್ರಿ ಬರುತ್ತಾರೆ ಎಂದು ನಾನು ಅಂದುಕೊಂಡಿಲ್ಲ. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ , ಅದರಲ್ಲಿರುವ ಸಚಿವರುಗಳೂ ಭ್ರಷ್ಟರು" ಎಂದಿದ್ದಾರೆ.
ಬಿಜೆಪಿಯು ರಾಜಕೀಯ ಸ್ವಾರ್ಥಕ್ಕಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದು, ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ಗೂಢಚಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.