ಬೆಂಗಳೂರು, ಜು.22 (DaijiworldNews/HR): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ನೀಡಿರುವ ಹೇಳಿಕೆಗೆ ನಮ್ಮ ಸಹಮತವಿದೆ. ಕೇಂದ್ರ ಸರ್ಕಾರವು ಏನೇ ಹೇಳಿದರೂ ಬಿಎಸ್ವೈ ಹಾಗೂ ನಾವು ತಲೆಬಾಗುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಸೂಚನೆಯಂತೆ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಈವರೆಗೂ ಹೈಕಮಾಂಡ್ನಿಂದ ಯಾವುದೇ ಸಂದೇಶ ಬಂದಿಲ್ಲ. ಜು.26ರಂದು ಯಡಿಯೂರಪ್ಪನವರು ಹೇಳಿದ ಹಾಗೆ ಕೇಂದ್ರದ ನಾಯಕರ ಜೊತೆ ಚರ್ಚಿಸುತ್ತಾರೆ" ಎಂದರು.
ಇನ್ನು ಈ ಬೆಳವಣಿಗೆಗಳ ನಿಮಗೆ ಬೇಸರ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಕರ್ನಾಟದಲ್ಲಿ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮದಲ್ಲಿದ್ದೇನೆ" ಎಂದಿದ್ದಾರೆ.
ಬಳಿಕ ಮಾತನಾಡಿದ ಸಚಿವ ಎಸ್.ಅಂಗಾರ, "ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಅದನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ನಾಯಕತ್ವ ಬದಲಾವಣೆ ಅಭ್ಯಂತರದ ಪ್ರಶ್ನೆಯೇ ಬರುವುದಿಲ್ಲ. ಇದು ಪಕ್ಷದ ತೀರ್ಮಾನ" ಎಂದು ಹೇಳಿದ್ದಾರೆ.