ಬೆಂಗಳೂರು, ಜು.22 (DaijiworldNews/HR): ಕೇಂದ್ರದ ನಾಯಕರು ಯಾವುದೇ ಸೂಚನೆ ನೀಡಿದರೂ ಅದನ್ನು ಪಾಲಿಸಲು ಸಿದ್ದನಿದ್ದೇನೆ. ಕಾರ್ಯಕರ್ತರು, ಶ್ರೀಗಳು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದು, ಮೊದಲ ಬಾರಿಗೆ ರಾಜೀನಾಮೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭಾರತದಲ್ಲಿ 75 ವರ್ಷ ಮೀರಿದ ಯಾರಿಗೂ ಬಿಜೆಪಿಯಲ್ಲಿ ಅಧಿಕಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಜೆಪಿ ನಡ್ಡಾ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದು, ಜುಲೈ 26 ಕ್ಕೆ ನಾನು ಎರಡು ವರ್ಷ ಅಧಿಕಾರ ಪೂರೈಸಲಿದ್ದು ಆ ಬಳಿಕ ಕೇಂದ್ರದ ನಾಯಕರು ನೀಡಿದ ಸೂಚನೆ ಪಾಲಿಸಲು ಸಿದ್ದ" ಎಂದರು.
ಇನ್ನು "ಜುಲೈ 25ಕ್ಕೆ ರಾಜ್ಯದಲ್ಲಿ ನಮ್ಮ ಸರ್ಕಾರ ಎರಡು ವರ್ಷ ಪೂರೈಸಲಿದ್ದು, 26ಕ್ಕೆ ಹೈಕಮಾಂಡ್ ಯಾವ ಸಂದೇಶ ಕಳುಹಿಸುತ್ತದೋ ಅದನ್ನು ನಾನು ಪಾಲಿಸುತ್ತೇನೆ" ಎಂದಿದ್ದಾರೆ.
"ನಮ್ಮ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ. ಬಿಜೆಪಿಯ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ರಾಜ್ಯದ ವಿವಿಧ ಮಠಾಧೀಶರು ನನ್ನ ಬಗ್ಗೆ ತೋರಿಸಿದ ಕಾಳಜಿಗೆ ಧನ್ಯವಾದಗಳು" ಎಂದು ರಾಜೀನಾಮೆ ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ.