ಬೆಂಗಳೂರು,ಜು 22 (DaijiworldNews/MS): ಸರ್ಕಾರ 2 ವರ್ಷ ಪೂರೈಸುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಜು.25 ರ ರಾತ್ರಿ ಆಯೋಜಿಸಿದ್ದ ಭೋಜನ ಕೂಟವೂ ಮುಂದೂಡಿಕೆಯಾಗಿದೆ.
ಜುಲೈ 26ರಂದು ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ರದ್ದುಗೊಳಿಸಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟವನ್ನು ಆಯೋಜಿಸಿರುವುದಾಗಿ ತಿಳಿಸಲಾಗಿತ್ತು.
ಎಲ್ಲಾ ಶಾಸಕರಿಗೆ ಮಂಗಳವಾರ ವಾಟ್ಸಪ್ ಮೂಲಕ ಭೋಜನಕೂಟದ ಬಗ್ಗೆ ಮಾಹಿತಿ ನೀಡಲಾಗಿತ್ತು. ಬೆಂಗಳೂರು ನಗರದ ಖಾಸಗಿ ಹೋಟೆಲ್ನಲ್ಲಿ ಜುಲೈ 25ರ ಸಂಜೆ 7.30ಕ್ಕೆ ಭೋಜನಕೂಟ ನಡೆಯಲಿದೆ ಎಂದು ಸಂದೇಶ ಕಳಿಸಲಾಗಿತ್ತು.
ಆದರೆ ಮುಖ್ಯಮಂತ್ರಿಗಳ ಸೂಚನೆ ಹಿನ್ನಲೆಯಲ್ಲಿ ಭೋಜನಕೂಟವನ್ನು ರದ್ದುಗೊಳಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆ, ಬಿಜೆಪಿ ಶಾಸಕರ ಔತಣಕೂಟ ಸಹ ರದ್ದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಜುಲೈ 26ಕ್ಕೆ ಎರಡು ವರ್ಷ ಪೂರ್ಣವಾಗಲಿದೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಅಂದು 10 ಆಯ್ದ ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೇಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ