ಕೊಲ್ಕತ್ತಾ, ಜು. 21 (DaijiworldNews/SM): ಪೆಗಾಸಸ್ ವಿವಾದದ ಕುರಿತಂತೆ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಕೇಂದ್ರ ಸರಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಿಜೆಪಿ ಸರಕಾರದ ನೀತಿಗಳಿಂದಾಗಿ ದೇಶದಲ್ಲಿ 'ಕಣ್ಗಾವಲು ಪರಿಸ್ಥಿತಿ' ನಿರ್ಮಾಣವಾಗಿದೆ. ಇದೀಗ ಬಿಜೆಪಿ ವಿರೋಧಿ ರಂಗ ರಚನೆಗೆ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ 'ಪ್ರತಿಪಕ್ಷ ನಾಯಕರು, ಸಚಿವರು, ನ್ಯಾಯಾಧೀಶರು ಮತ್ತು ಅಧಿಕಾರಿಗಳ ಫೋನ್ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಪಕ್ಷ ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲಾಗಿಸುತ್ತಿದೆ. ಆ ಮೂಲಕ ಪಕ್ಷ ಪ್ರಜಾಪ್ರಭುತ್ವವನ್ನು ಪ್ರೀತಿಸುತಿಲ್ಲ ಎಂಬುವುದನ್ನು ಸಾಬೀತುಪಡಿಸಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ವಿರೋಧಿ ಪಕ್ಷಗಳು ಒಂದಾಗಬೇಕು ಬಿಜೆಪಿ ವಿರುದ್ಧ ಹೋರಾಡಲು ಇದು ಸೂಕ್ತ ಸಮಯವಾಗಿದೆ.
ಇನ್ನು ಫೋನ್ ಕದ್ದಾಳಿಕೆಯಿಂದಾಗಿ ಯಾವುದೇ ಪ್ರತಿಪಕ್ಷದ ನಾಯಕರಿಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೀದಿ ಆರೋಪಿಸಿದ್ದಾರೆ. ನಮ್ಮೆಲ್ಲರ ಫೋನ್ ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಎಲ್ಲಾ ವಿರೋಧ ಪಕ್ಷದ ನಾಯಕರು ತಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಒಂದಾಗಬೇಕಾಗಿದೆ ಎಂದು ಮಮತಾ ತಿಳಿಸಿದ್ದಾರೆ.