ಶಿವಮೊಗ್ಗ, ಜು 21 (DaijiworldNews/PY): "ಸಿಎಂ ಬದಲಾವಣೆ ವಿಚಾರದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ" ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಯಡಿಯೂರಪ್ಪ ಅವರು ಆಡಳಿತ ಸೇರಿದಂತೆ ಅಭಿವೃದ್ದಿ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಸಚಿವರಾಗಿ ನಮ್ಮ ಮುಂದೆ ಇರುವುದು ಕೇವಲ ಅಭಿವೃದ್ದಿ ವಿಚಾರ ಮಾತ್ರ. ಸಿಎಂ ಅವರು, ಅಭಿವೃದ್ದಿ ಹಾಗೂ ಕೊರೊನಾ ನಿಯಂತ್ರಣದ ಬಗ್ಗೆ ಗಮನಹರಿಸಲು ಸೂಚನೆ ನೀಡಿದ್ದಾರೆ. ಅವರ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ" ಎಂದಿದ್ದಾರೆ.
"ಪಕ್ಷವನ್ನು ಕಟ್ಟಿದ ಧೀಮಂತ ನಾಯಕ ಎಂದರೆ ಬಿ.ಎಸ್.ಯಡಿಯೂರಪ್ಪ ಅವರು. ಯಡಿಯೂರಪ್ಪ ಅವರಿಗೆ ಬಡವರ ನಾಡಿಮಿಡಿತ ತಿಳಿದಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರಿಸಿ ಎಂದು ಕಾಂಗ್ರೆಸ್ ನಾಯಕರ ಒತ್ತಾಯ ಪಕ್ಷದ ಕಾರ್ಯಸೂಚಿಯಲ್ಲ. ಬಿಜೆಪಿ ವರಿಷ್ಠರ ತೀರ್ಮಾನವೇ ಅಂತಿಮ" ಎಂದು ಹೇಳಿದ್ದಾರೆ.
"ಸಿಎಂ ಬದಲಾವಣೆ ವಿಚಾರದಲ್ಲಿ ಎಲ್ಲರೂ ಬಾಯಿಮುಚ್ಚಿಕೊಂಡು ಇರಬೇಕು. ಈ ವಿಚಾರದ ಬಗ್ಗೆ ಅನಗತ್ಯಾಗಿ ಮಾತನಾಡಿದರೆ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ. ಏನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ" ಎಂದಿದ್ದಾರೆ.
"ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ಸಿಎಂ ಬದಲಾವಣೆ ಬಗ್ಗೆ ಕೇಳಬೇಕು. ತಮ್ಮ ಬಳಿ ಆ ರೀತಿಯಾದ ಯಾವುದೇ ಮಾಹಿತಿ ಇಲ್ಲ. ಯಡಿಯೂರಪ್ಪ ಅವರನ್ನೇ ಸಿಎಂ ಆಗಿ ಮುಂದುವರಿಸಲು ವಿವಿಧ ಮಠಾಧೀಶರು ಒತ್ತಾಯಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.