ನವದೆಹಲಿ, ಜು 21 (DaijiworldNews/PY): "ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು, ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಲ್ಲ ಎಂದಿದ್ದವು. ಆದರೆ, ಇದೀಗ ರಾಜಕೀಯ ಮಾಡುತ್ತಿವೆ" ಎಂದು ಬಿಜೆಪಿ ಆರೋಪಿಸಿದೆ.
"ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ನ್ಯಾಯಾಲಯಗಳಿಗೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ಹೇಳಿದ್ದವು. ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನೀಡಿದ್ದ ಅಂಕಿ-ಅಂಶದ ಆಧಾರದ ಮೇಲೆಯೇ ಕೇಂದ್ರ ಸರ್ಕಾರ ವರದಿ ನೀಡಿದೆ" ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿಳಿಸಿದ್ದಾರೆ.
"ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಬಗ್ಗೆ ಯಾವುದೇ ರಾಜ್ಯ ಮಾಹಿತಿ ನೀಡಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರತಿಪಕ್ಷಗಳ ಇತರ ನಾಯಕರು ರಾಜಕೀಯ ಮಾಡುತ್ತಿದ್ದಾರೆ" ಎಂದು ದೂರಿದ್ದಾರೆ.
ದೇಶ ದಲ್ಲಿ ಕೊರೊನಾದ ಎರಡನೇ ಅಲೆಯ ವೇಳೆ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂದು ಮಂಗಳವಾರ ರಾಜ್ಯಸಭೆಗೆ ಕೇಂದ್ರ ಸರ್ಕಾರ ತಿಳಿಸಿತ್ತು. ಪ್ರತಿಪಕ್ಷಗಳ ನಾಯಕರು ಇದನ್ನು ಟೀಕಿಸಿದ್ದರು.
ಕೆಲ ರಾಜ್ಯಗಳಲ್ಲಿ ಎಪ್ರಿಲ್-ಮೇ ತಿಂಗಳನಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.