ಬೆಂಗಳೂರು, ಜು 21 (DaijiworldNews/MS): ಬಿಜೆಪಿ ಪಕ್ಷದವರೇ ಮುಖ್ಯಮಂತ್ರಿ .ಎಸ್. ಯಡಿಯೂರಪ್ಪನವರನ್ನು ಬದಲಾಯಿಸಲು ಹೊರಟಿರೋದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಿನ ಬಿಜೆಪಿ ನೇತೃತ್ವದ ಸರ್ಕಾರ ಸುಲಭದಲ್ಲಿ ಅಧಿಕಾರಕ್ಕೆ ಬಂದಿರುವುದಲ್ಲ, ಬಿಜೆಪಿ ಬಹಳ ಕಷ್ಟ ಪಟ್ಟು ಒಬ್ಬೊಬ್ಬರೇ ಶಾಸಕರನ್ನು ಕೊಂಡು ಕೊಂಡು ಸರ್ಕಾರ ಮಾಡಿರುವುದು. ಇದೀಗ ಅವರೇ ಕಿತ್ತಾಡಿ ಸಿಎಂ ಬದಲಾಯಿಸಲು ಹೊರಟಿದ್ದಾರೆ. ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀಳುತಿದೆ ಜನರಿಗೆ ಇದರಿಂದ ತೊಂದರೆ ಆಗುತ್ತಿದೆ. ಸಿಎಂಗೆ ನಾನು ಮೊದಲೇ ಹೇಳಿದ್ದೇ ನಿಮ್ಮಲ್ಲಿ ಇರುವ ಗೊಂದಲವನ್ನು ಸರಿಪಡಿಸಿ ಎಂದು ಹೇಳಿದ್ದಾರೆ.
ಬಿಜೆಪಿಯವರ ತಪ್ಪುಗಳು ಕಾಂಗ್ರೆಸ್ಗೆ ಅನುಕೂಲವಾಗಿ ಮಾರ್ಪಡಾಗಲಿದೆ. ಯಡಿಯೂರಪ್ಪ ನವರೇ ಅಧಿಕಾರ ಪೂರ್ಣ ಮಾಡಬೇಕು ಎಂಬ ಆಸೆ ನಮಗಿದೆ. ಯಾಕೆಂದರೆ ಅವರು ಅನೇಕ ತಪ್ಪುಗಳನ್ನು ಮಾಡಿದ್ದಾರೆ ಇದರಿಂದ ನಮಗೆ ಅನುಕೂಲ ಎಂದು ವಿವರಿಸಿದರು.
ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದಷ್ಟು ಬಿಜೆಪಿಯ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ನಾವು ಅವರ ಹೆಸರುಗಳನ್ನು ಈಗಲೇ ಹೇಳುವುದಕ್ಕೆ ಆಗಲ್ಲ ಸಮಯ ಬಂದಾಗ ಅದನ್ನು ಹೇಳುತ್ತೇವೆ ಎಂದು ತಿಳಿಸಿದ್ದಾರೆ.