ನವದೆಹಲಿ, ಜು 21 (DaijiworldNews/PY): ಕೊರೊನಾ ಸೋಂಕಿನಿಂದ ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳು ಅನಾಥರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ದೇಶದಲ್ಲಿ ಕೊರೊನಾ ಆರಂಭವಾದ ಮೊದಲ 14 ತಿಂಗಳಿನಲ್ಲಿ 1 ಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ.
ಈ ವಿಚಾರದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡ್ರಗ್ ಅಬ್ಯೂಸ್ (ಎನ್ಐಡಿಎ), ಕೊರೊನಾ ಆರಂಭವಾದ ಮೊದಲ 14 ತಿಂಗಳಿನಲ್ಲಿ 1,19,000 ಮಕ್ಕಳು ಸೇರಿದಂತೆ 21 ದೇಶಗಳಲ್ಲಿ 1.5 ದಶಲಕ್ಷಕ್ಕೂ ಅಧಿಕ ಮಕ್ಕಳು ತಮ್ಮ ಪ್ರಾಥಮಿಕ ಹಾಗೂ ದ್ವಿತೀಯಕ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ದೇಶದಲ್ಲಿ ಕೊರೊನಾ ಕಾರಣದಿಂದ 25,500 ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರೆ, 90,751 ಮಂದಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. 12 ಮಕ್ಕಳು ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಕೊರೊನಾ ಕಾರಣದಿಂದ 11,34,000 ಮಕ್ಕಳು ಪೋಷಕರು ಅಥವಾ ಪಾಲನೆ ಮಾಡುತ್ತಿದ್ದ ಅಜ್ಜಿಯಂದಿರನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 10,42,000 ಮಕ್ಕಳು ತಾಯಿ, ತಂದೆ ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಒಟ್ಟು 15,62,000 ಮಕ್ಕಳು ಕನಿಷ್ಠ ಒಬ್ಬ ಪೋಷಕರು ಅಥವಾ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದೆ.
ಪೋಷಕರನ್ನು ಅಥವಾ ಪಾಲಕರನ್ನು ಕಳೆದುಕೊಂಡಿರಿವ ಮಕ್ಕಳನ್ನು ಹೊಂದಿರುವ ದೇಶಗಳ ಪೈಕಿ ಭಾರತ, ಮೆಕ್ಸಿಕೊ ಸೇರಿದಂತೆ ಪೆರು, ದಕ್ಷಿಣ ಆಫ್ರಿಕಾ, ಇರಾನ್, ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಕೊಲಂಬಿಯಾ, ಅರ್ಜೆಂಟೀನಾ ಹಾಗೂ ರಷ್ಯಾ ಸೇರಿವೆ.