ಬೆಂಗಳೂರು, ಜು 21 (DaijiworldNews/PY): "ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ತೃಪ್ತಿ ಇಲ್ಲದವರು ಜುಲೈ 30ರೊಳಗೆ ಅರ್ಜಿ ಸಲ್ಲಿಸಿ" ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
"ಸಲ್ಲಿಕೆಯಾದ ಅರ್ಜಿಗಳು ಪ್ರಾಂಶುಪಾಲರು ಸ್ಟೂಟೆಂಟ್ಸ್ ಅಜಿವ್ಮೆಂಟ್ ಟ್ರ್ಯಾಕಿಂಗ್ ಪೋರ್ಟಲ್ನಲ್ಲಿ ದಾಖಲಿಸಲು ಜುಲೈ 30 ಕೊನೆಯ ದಿನವಾಗಿದೆ. ಅರ್ಜಿಯನ್ನು ಜು.31ರೊಳಗೆ ಕಡ್ಡಾಯವಾಗಿ ತಮ್ಮ ಜಿಲ್ಲಾ ಉಪನಿರ್ದೇಶಕ ಕಚೇರಿಗೆ ಸಲ್ಲಿಸಬೇಕು. ಆಗಸ್ಟ್ 2ರೊಳಗೆ ಉಪ ನಿರ್ದೇಶಕರು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಬೇಕು" ಎಂದು ತಿಳಿಸಿದ್ದಾರೆ.
ಪಿಯು ಪರೀಕ್ಷಾ ಶುಲ್ಕ ಮರುಪಾವತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಹಿಂತಿರುಗಿಸುವ ಯಾವುದೇ ಚಿಂತನೆ ಇಲ್ಲ" ಎಂದಿದ್ದಾರೆ.
"ಪರೀಕ್ಷೆ ರದ್ದಾಗಿದ್ದರೂ ಕೂಡಾ ಫಲಿತಾಂಶ ನೀಡಲು ಇಲಾಖೆಗೆ ಹಾಲಿ ಸಂಗ್ರಹಿಸಿರುವ ಪರೀಕ್ಷಾ ಶುಲ್ಕದ ಮೊತ್ತಕ್ಕಿಂತ ಅಧಿಕ ವೆಚ್ಚ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಆಗಿದೆ. ಈ ಹಿನ್ನೆಲೆ ಪರೀಕ್ಷಾ ಶುಲ್ಕ ವಾಪಾಸ್ಸು ನೀಡವುದಿಲ್ಲ" ಎಂದು ತಿಳಿಸಿದ್ದಾರೆ.
"ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳು ಜು.30ರೊಳಗೆ ಅರ್ಜಿ ಸಲ್ಲಿಸಬೇಕು. ಅಂತಹ ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡ ಅರ್ಜಿ ಸಲ್ಲಿಸಬೇಕು. ಫಲಿತಾಂಶ ರದ್ದುಪಡಿಸಿಕೊಂಡ ವಿದ್ಯಾರ್ಥಿಗಳಿಗೆ ಆಗಸ್ಟ್ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ" ಎಂದಿದ್ದಾರೆ.
"ಈ ಬಾರಿ ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿರುವ ಕಾರಣ ಉನ್ನತ ಶಿಕ್ಷಣ ಪ್ರವೇಶಕ್ಕೆ ಸಂಖ್ಯೆ ಹೆಚ್ಚಾಗಲಿದೆ. ಈ ಬಗ್ಗೆ ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರ ಜೊತೆ ಮಾತುಕತೆ ನಡೆಸಲಾಗಿದೆ" ಎಂದು ತಿಳಿಸಿದ್ದಾರೆ.
"ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಪ್ರತಿಯೋರ್ವ ವಿದ್ಯಾರ್ಥಿಗೂ ಪದವಿ ವ್ಯಾಸಂಗಕ್ಕೆ ಅವಕಾಶ ಆಗುವಂತೆ ಪದವಿ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳ ಮಾಡಲು ಉನ್ನತ ಶಿಕ್ಷಣ ಇಲಾಖೆ ಕ್ರಮವಹಿಸಲಿದೆ" ಎಂದಿದ್ದಾರೆ.