ಬೆಂಗಳೂರು, ಜು 21 (DaijiworldNews/MS): ರಾಜ್ಯ ರಾಜಕೀಯದಲ್ಲಿ ನಿಗೂಢ ಬೆಳವಣಿಗೆ ನಡೆಯುತ್ತಿರುವ ಮಧ್ಯೆಯೇ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಹೈಕಮಾಂಡ್ ನಿಂದ ಬುಲಾವ್ ಬಂದಿದ್ದು, ಬುಧವಾರ ಬೆಳಗ್ಗೆ ದೆಹಲಿಗೆ ದಿಢೀರ್ ಪ್ರಯಾಣ ಬೆಳೆಸಿರುವುದು ಕುತೂಹಲ ಕೆರಳಿಸಿದೆ.
ಮಂಗಳವಾರ ತಡರಾತ್ರಿ ಹೈಕಮಾಂಡ್ ದೂರವಾಣಿ ಕರೆಮಾಡಿ ದೆಹಲಿಗೆ ಬರುವಂತೆ ಶ್ರೀರಾಮುಲು ಅವರಿಗೆ ಸೂಚಿಸಿದ ಮೇರೆಗೆ ಇಂದು ಬೆಳಗ್ಗೆ 5.30ರ ವಿಮಾನದಲ್ಲಿ ಶ್ರೀರಾಮುಲು ಅವರು ದೆಹಲಿಗೆ ತೆರಳಿ ಬಳಿಕ ಹೈಕಮಾಂಡ್ ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಹ್ವಾನದ ಮೇರೆಗೆ ತೆರಳಿದ್ದು ಇವರಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಶ್ರೀರಾಮುಲು ಭೇಟಿ ಮಾಡಿರಬಹುದು ಎನ್ನಲಾಗುತ್ತಿದೆ.
ಈ ಮಧ್ಯೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಂಗಳವಾರ ರಾತ್ರಿಯೇ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜುಲೈ 26ರಂದು ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ಎನ್ನುವ ಸುದ್ದಿಗಲು ಕೇಳಿಬರುತ್ತಿರುವ ಬೆನ್ನಲ್ಲೇ ಶ್ರೀರಾಮುಲು ಅವರನ್ನು ದೆಹಲಿಗೆ ಕರೆಯಿಸಿಕೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಬಿಜೆಪಿ ಹೈಕಮಾಂಡ್ಗೆ ರವಾನೆಯಾಗಿರುವ ಐವರು ಸಂಭವನೀಯ ನಾಯಕರ ಪಟ್ಟಿಯಲ್ಲಿ ಸಚಿವ ಶ್ರೀರಾಮುಲು ಅವರ ಹೆಸರೂ ಇದೆ ಎನ್ನಲಾಗಿದೆ.