ನವದೆಹಲಿ, ಜು 21 DaijiworldNews/MS): ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ, ಇಲ್ಲಿಯವರೆಗೆ ಸುಮಾರು 30 ಕೋಟಿ ರೂಪಾಯಿ (30,80,91,225) ಆದಾಯ ಗಳಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
"ಮನ್ ಕಿ ಬಾತ್" ಕಾರ್ಯಕ್ರಮವನ್ನು ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಖಿಲ ಭಾರತ ರೇಡಿಯೋ ಮತ್ತು ದೂರದರ್ಶನದ ವಿವಿಧ ಚಾನೆಲ್ಗಳ ಮೂಲಕ ಪ್ರಸಾರ ಮಾಡಲಾಗುತ್ತದೆ.
"ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 2014 ರಲ್ಲಿ ಪ್ರಾರಂಭವಾದಾಗಿನಿಂದ 30.80 ಕೋಟಿ ರೂ.ಗಳಷ್ಟು ಆದಾಯವನ್ನು ಗಳಿಸಿದೆ, 2017-18ರಲ್ಲಿ ಗಳಿಸಿದ ಗರಿಷ್ಠ 10.64 ಕೋಟಿ ರೂ.ಗಳನ್ನು ಗಳಿಸಿದೆ" ಎಂದು ರಾಜ್ಯಸಭೆಗೆ ಸೋಮವಾರ ತಿಳಿಸಲಾಗಿದೆ.
"ಪ್ರಸಾರ್ ಭಾರತಿ 'ಮನ್ ಕಿ ಬಾತ್' ಕಾರ್ಯಕ್ರಮದ 78 ಸಂಚಿಕೆಗಳನ್ನು ತನ್ನ ಅಖಿಲ ಭಾರತ ರೇಡಿಯೋ ಮತ್ತು ದೂರದರ್ಶನ ನೆಟ್ವರ್ಕ್ನಲ್ಲಿ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಪ್ರಸಾರ ಮಾಡಿದೆ. ಈಗ 23 ಭಾಷೆ, 29 ಉಪ ಭಾಷೆಗಳಲ್ಲೂ 'ಮನ್ ಕೀ ಬಾತ್' ಪ್ರಸಾರವಾಗುತ್ತಿದೆ ಎಂದು ಮಳೆಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವ ವೇಳೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಗೆ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ .
ಪ್ರಸಾರ ಭಾರತಿ ತನ್ನ ಹಿಂದಿ ಮತ್ತು ವಿವಿಧ ಭಾಷೆಗಳ ದೂರದರ್ಶನ ಚಾನೆಲ್ಗಳ ಮೂಲಕ 'ಮನ್ ಕೀ ಬಾತ್'ನ ದೃಶ್ಯೀಕೃತ ಆವೃತ್ತಿಗಳನ್ನೂ ಪ್ರಸಾರ ಮಾಡುತ್ತಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನಗಳ ಹೊರತಾಗಿಯೂ ಈ ಕಾರ್ಯಕ್ರಮವನ್ನು ದೇಶದಲ್ಲಿ ಸುಮಾರು 91 ಖಾಸಗಿ ಸ್ಯಾಟಲೈಟ್ ಟಿವಿ ಚಾನಲ್ಗಳು, ಕೇಬಲ್, ಡಿಟಿಎಚ್ ಪ್ಲ್ಯಾಟ್ಫಾರಂಗಳು ಪ್ರಸಾರ ಮಾಡುತ್ತಿವೆ.'ಅದರೊಂದಿಗೆ ಐಓಎಸ್, ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ನ್ಯೂಸ್ ಆನ್ ಏರ್ ಮೂಲಕ ಅಥವಾ ಪ್ರಸಾರ ಭಾರತಿಯ ಯೂಟ್ಯೂಬ್ ಚಾನಲ್ಗಳ ಮೂಲಕ ಮನ್ ಕೀ ಬಾತ್ ಕೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿವರ್ಷದ ಅಂಕಿ- ಅಂಶ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, "2014-15ರಲ್ಲಿ 1.16 ಕೋಟಿ, 2015-16ರಲ್ಲಿ 2.18 ಕೋಟಿ, 2016-17ರಲ್ಲಿ 5.14, 2017-18ರಲ್ಲಿ 10.64 ಕೋಟಿ, 2018-19ರಲ್ಲಿ 7.47 ಕೋಟಿ, 2019-20ರಲ್ಲಿ 1.56 ಕೋಟಿ, 2020-21ರಲ್ಲಿ 1.02 ಕೋಟಿ ಆದಾಯ ಸೇರಿ ಒಟ್ಟು 30.80 ಕೋಟಿ ರೂಪಾಯಿ ಆದಾಯ ಬಂದಿದೆ,'' ಎಂದು ಹೇಳಿದ್ದಾರೆ.
"ಪ್ರಧಾನ ಮಂತ್ರಿಯ ‘ ಮನ್ ಕಿ ಬಾತ್ ’ ಕಾರ್ಯಕ್ರಮದ ಮುಖ್ಯ ಉದ್ದೇಶ ರೇಡಿಯೊ ಮೂಲಕ ದೇಶಾದ್ಯಂತ ಜನಸಾಮಾನ್ಯರಿಗೆ ತಲುಪುವುದು" ಎಂದು ಸಚಿವರು ಹೇಳಿದ್ದಾರೆ.