ಬೆಂಗಳೂರು, ಜು 20 (DaijiworldNews/HR): ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಫೋನ್ ಕದ್ದಾಲಿಕೆ ಆಗಿದೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಆರೊಪ ಮಾಡಿದವರು ಯಾವುದೇ ಸಾಕ್ಷಿ ನೀಡಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ" ಎಂದು ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಬಿಜೆಪಿ ಪಕ್ಷವು ಈ ರೀತಿಯ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಆ ಕೆಲಸ ಮಾಡುತ್ತದೆ. ಯುಪಿಎ ಸರ್ಕಾರದಲ್ಲಿ ಫೋನ್ ಕದ್ದಾಲಿಕೆಗೆ ಸಾವಿರಾರು ರೂ..ಖರ್ಚು ಮಾಡುತ್ತಿರುವುದಾಗಿ ಅಂದಿನ ಸರ್ಕಾರದಲ್ಲಿ ಮಂತ್ರಿಗಳಾದವರೇ ಹೇಳಿದ್ದು, ಡಾಟಾ ಲೀಕ್ ಆಗಿದ್ದರೆ ಅದಕ್ಕೆ ಕೇಂದ್ರ ಸರ್ಕಾರ ಹೇಗೆ ಹೊಣೆಯಾಗುತ್ತದೆ" ಎಂದು ಕಿಡಿ ಕಾರಿದ್ದಾರೆ.
ಇನ್ನು ಪಿಲ್ ಸಿಬಲ್ ಅವರೇ ವಾಟ್ಸ್ ಆಪ್ ನಿಂದ ಕದ್ದಾಲಿಸಲು ಸಾಧ್ಯವಿಲ್ಲ ಎಂದು ಕಸುಪ್ರೀಂ ಕೋರ್ಟ್ ಗೆ ಹೇಳಿದ್ದು, ಪೆಗಾಸಿಸ್ ಸಂಸ್ಥೆ ಹೊರದೇಶಗಳಲ್ಲಿ ಈ ರೀತಿ ಚಟುವಟಿಕೆಗಳನ್ನು ನಡೆಸುತ್ತದೆ. ದೇಶದ್ರೋಹಿಗಳು ನಮ್ಮ ಸರ್ಕಾರದ ವಿರುದ್ಧ ಅಪ ಪ್ರಚಾರ ಮಾಡುವುದನ್ನು ಖಂಡಿಸುತ್ತೇವೆ" ಎಂದು ಹೇಳಿದರು.
"ಕೇಂದ್ರ ಸರ್ಕಾರ ಕದ್ದಾಲಿಕೆ ಮಾಡಿರುವ ದಾಖಲೆ ಇಲ್ಲ. ಕೊರೊನಾ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಿರುವುದನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ" ಎಂದು ಹೇಳಿದ್ದಾರೆ.