ಬೆಂಗಳೂರು,ಜು.20 (DaijiworldNews/HR): "ಪೆಗಸಸ್ ಸ್ಪೈವೇರ್ ಮೂಲಕ ಪ್ರತಿಷ್ಟಿತ ವ್ಯಕ್ತಿಗಳ ಮೇಲೆ ಕಣ್ಗಾವಲು ಇಡುವ ಕೇಂದ್ರದ ದುಷ್ಟ ಬುದ್ದಿ ಜಗತ್ತಿನ ಮುಂದೆ ಬೆತ್ತಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೂ ಕಣ್ಗಾವಲು ನಡೆಸಿರುವುದು ಕ್ರಿಮಿನಲ್ಗಳು ಮಾಡುವಂತ ಕೆಲಸ. ಕೇಂದ್ರದ ಆಯಕಟ್ಟಿನ ಜಾಗದಲ್ಲಿ ಕ್ರಿಮಿನಲ್ಗಳೇ ಇರುವಾಗ ಕ್ರಿಮಿನಲ್ ಕೆಲಸವಲ್ಲದೆ ಒಳ್ಳೆ ಕೆಲಸ ಮಾಡಲು ಸಾಧ್ಯವೇ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಅಸಮರ್ಥ ನಾಯಕನಿಗೆ ಸದಾ ಅಸ್ತಿತ್ವದ ಭಯ ಕಾಡುತ್ತದೆ. ಮೋದಿಯವರಿಗೂ ಈಗ ಅಸ್ತಿತ್ವದ ಭಯವಿದೆ. ಹಾಗಾಗಿ ಪೆಗಾಸಸ್ ಮೂಲಕ ಮುಖ್ಯ ನ್ಯಾಯಮೂರ್ತಿ, ರಾಜಕೀಯ ನಾಯಕರು ಹಾಗೂ ಪತ್ರಕರ್ತರ ಚಲನವಲನಗಳ ಮೇಲೆ ಕಣ್ಗಾವಲು ಇಡುವ ಹೀನ ಕೆಲಸಕ್ಕೆ ಕೈ ಹಾಕಿದ್ದಾರೆ. ಕೇಂದ್ರದ ಈ ಕೃತ್ಯ, ವ್ಯಕ್ತಿಗಳ ಖಾಸಗಿ ಹಕ್ಕಿನ ಉಲ್ಲಂಘನೆಯ ಜೊತೆ ಅಪರಾಧ ಕೂಡ ಹೌದು ಎಂದಿದ್ದಾರೆ. ಕೇಂದ್ರದ ಈ ಕೃತ್ಯ, ವ್ಯಕ್ತಿಗಳ ಖಾಸಗಿ ಹಕ್ಕಿನ ಉಲ್ಲಂಘನೆಯ ಜೊತೆ ಅಪರಾಧ ಕೂಡ ಹೌದು" ಎಂದಿದ್ದಾರೆ.
ಇನ್ನು "ಕೆಲವರಿಗೆ ಮದ್ದು ಹಾಕುವ ಕೆಟ್ಟ ರೋಗವಿರುತ್ತದೆ. ಅವರಿಗೆ ಮದ್ದು ಹಾಕಲು ಯಾರೂ ಸಿಗದಿದ್ದರೆ ಕೊನೆಗೆ ಮನೆಯವರಿಗೆ ಮದ್ದು ಹಾಕುತ್ತಾರೆ. ನಳಿನ್ ಕುಮಾರ್ ಕಟೀಲ್ ರವರ ಸಿಎಂ ಬದಲಾವಣೆ ಆಡಿಯೋ ಲೀಕ್ ಹಿಂದೆಯೂ ಕೇಂದ್ರದ ಕೈವಾಡವಿರಬಹುದು. ಕಟೀಲ್ರವರೇ ನಿಮ್ಮ ಆಡಿಯೋ ಲೀಕ್ ಹಿಂದಿನ ರಹಸ್ಯವೇನು ಎಂಬುದನ್ನು ಒಮ್ಮೆ ಅಮಿತ್ ಶಾ ಬಳಿ ಕೇಳಿ ತಿಳಿದುಕೊಳ್ಳಿ" ಎಂದು ಹೇಳಿದ್ದಾರೆ.